

ವಿಜಯಪುರ: ಬಿಸಿಲೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದ ಜೊತೆ ಜೊತೆಯಲ್ಲಿಯೇ ಚುನಾವಣೆ ರಂಗು ಕೂಡ ಹೆಚ್ಚಾಗುತ್ತಿದ್ದು, ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಸೋಮವಾರ ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನದೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ನಗರದ ಬಿಎಲ್‌ಡಿಇ ಸಂಸ್ಥೆಯಲ್ಲಿರುವ ದಿ.ಬಿ.ಎಂ. ಪಾಟೀಲರ ಸಮಾಧಿಗೆ ನಮಿಸಿ ಅಲ್ಲಿಂದ ಸಿದ್ಧೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಪಾರ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ನಗರದ ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆದ ಮೆರವಣಿಗೆಗೆ ವಿವಿಧ ಕಲಾತಂಡಗಳು ಮೆರಗು ನೀಡಿದವು. ಕಾರ್ಯಕರ್ತರ ಜಯಘೋಷ ಪ್ರತಿಧ್ವನಿಸಿತು. ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜಗಳು-ಟೊಪ್ಪಿಗೆಗಳು ರಾರಾಜಿಸಿದವು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಹತ್ತು ಸಾವಿರಕ್ಕೂ ಅಧಿಕ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಿದ್ಧರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜಯಘೋಷ ಹಾಕಿದರು. ಕಾಂಗ್ರೆಸ್ ಸಾಧನೆ ಕುರಿತು ಮುಖಂಡರುಗಳು ನೆರೆದ ಜನಸ್ತೋಮಕ್ಕೆ ಮನದಟ್ಟು ಮಾಡುವ ಪ್ರಯತ್ನಮಾಡಿದರು. ಟಂಟಂ, ಕ್ರೂಸರ್, ಟೆಂಪೋ ಹಾಗೂ ಕಾರ್‌ಗಳಲ್ಲಿ ಬಂದ ಕಾರ್ಯಕರ್ತರು ಸೂಕ್ತ ಪಾರ್ಕಿಂಗ್‌ಗಾಗಿ ಪರದಾಡಿದರು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸಂಚಾರ ದಟ್ಟಣೆ ನಿಭಾಯಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತು.
ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಕೆಲ ಕಾಲ ಬಿಹಿರಂಗ ಸಭೆಯನ್ನುದ್ದೇಶಿಸಿದ ಮಾತನಾಡಿದ ಶಾಸಕರುಗಳು, ಬಿಜೆಪಿಯ ವೈಫಲ್ಯಗಳು ಹಾಗೂ ಕಾಂಗ್ರೆಸ್ ಸಾಧನೆಗಳ ಕುರಿತು ಜನರಿಗೆ ಮನದಟ್ಟು ಮಾಡಿದರು. ಬಳಿಕ ಜಿಲ್ಲಾಡಳಿತ ಕಚೇರಿಗೆ ತೆರಳಿ ಚುನಾವಣೆ ಅಧಿಕಾರಿ ಟಿ.ಭೂಬಾಲನ್‌ಗೆ ನಾಮಪತ್ರ ಸಲ್ಲಿಸಿದರು. ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ವಿಠಲ ಕಟಕದೊಂಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತ್ತಿತರರಿದ್ದರು.