ಕಾಂಗ್ರೆಸ್ ಹಣದ ಮೂಲ ಬಹಿರಂಗಪಡಿಸಲಿ

R.Ashok
Published on

ಹುಬ್ಬಳ್ಳಿ : ರಾಷ್ಟ್ರೀಯ ಸ್ವಯಂಸೇವರ ಸಂಘ(ಆರ್​ಎಸ್​ಎಸ್)ದ ಹಣದ ಮೂಲದ ಬಗ್ಗೆ ವಿಚಾರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೊದಲು ಕಾಂಗ್ರೆಸ್​ನ ಹಣದ ಮೂಲ ಬಹಿರಂಗಪಡಿಸಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಸವಾಲು ಹಾಕಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್ ದೇಶಪ್ರೇಮ ಬೆಳೆಸುವ, ವಿಪತ್ತಿನ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸಹಾಯ ಮಾಡುವ ಸಂಘಟನೆ. ಅದಕ್ಕೆ ಯಾವುದೇ ಸ್ವಂತ ಆಸ್ತಿ ಅಥವಾ ಕಟ್ಟಡಗಳು ಇಲ್ಲ. ಸಂಘಟನೆಯ ಲೆಕ್ಕ ವಿವರಗಳನ್ನು ಕೇಳಲು ಬೇರೆ ಇಲಾಖೆಗಳು ಇವೆ. ಅದನ್ನು ಪ್ರಶ್ನಿಸುವ ಹಕ್ಕು ಪ್ರಿಯಾಂಕ್ ಖರ್ಗೆಗೆ ಇಲ್ಲ ಎಂದರು.

ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಗಲಾಟೆ ನಡೆಯುತ್ತಿದೆ. ನವೆಂಬರ್​ ಅಥವಾ ಡಿಸೆಂಬರ್​ನಲ್ಲಿ ಕ್ರಾಂತಿಯ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ. ಜಾತಿಗಣತಿ ವಿವಾದ, ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆರ್​ಎಸ್​ಎಸ್ ವಿಷಯವನ್ನು ಕಾಂಗ್ರೆಸ್ ಚರ್ಚೆಗೆ ತಂದಿದೆ ಎಂದು ಆರೋಪಿಸಿದರು.

ಬೆಳೆ ಹಾನಿಗೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ಆಗದ ಕಾಂಗ್ರೆಸ್ ಸರ್ಕಾರಕ್ಕೆ ಆರ್​ಎಸ್​ಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಲಾ ಸಹಾ ಇಲ್ಲ, ಆರ್ಡರ್ ಕೂಡಾ ಇಲ್ಲ. ಸಿಎಂ ಸಿದ್ದರಾಮಯ್ಯ ನಿದ್ರೆಯಲ್ಲಿ ಬಿಜಿಯಾಗಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ ಪವರ್ ಗ್ರ್ಯಾಬಿಂಗ್​ನಲ್ಲಿ ನಿರತರಾಗಿದ್ದಾರೆ. ಗೃಹ ಸಚಿವ ಡಾ. ಪರಮೇಶ್ವರ ಅವರು ಏನು ಕೇಳಿದರೂ ಗೊತ್ತಿಲ್ಲ ಅಂತಾರೆ. ಹೀಗಾಗಿ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಣೆಯಾಗಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net