ದೇಶದ ಜನರ ಕ್ಷಮೆ ಕೇಳಲಿ ಕಾಂಗ್ರೆಸ್: ದತ್ತಾತ್ರಿ

dattatri
ಎಸ್.ದತ್ತಾತ್ರಿ, ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ರಾಜ್ಯ ಸಂಚಾಲಕ.
Published on

ಶಿವಮೊಗ್ಗ: ಕಾಂಗ್ರೆಸ್‌ನವರು ತಮ್ಮಿಂದಲೇ ಸಂವಿಧಾನ ಉಳಿದಿರುವುದು ಎಂದು ಜನರನ್ನು ವಂಚಿಸುತ್ತಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಅಧಿಕಾರ ಉಳಿಸಿಕೊಳ್ಳುವ ಸ್ವಾರ್ಥದಿಂದ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸಿಗರು ದೇಶದ ಕ್ಷಮೆ ಕೋರಬೇಕೆಂದು ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ಒತ್ತಾಯಿಸಿದರು.

ರಾಹುಲ್ ಗಾಂಧಿ ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಂದರ್ಭ ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವಾಗ ಕಾಂಗ್ರೆಸ್‌ನ ಸಂಸತ್ ಸದಸ್ಯರು ಪದೇಪದೆ ಸಂವಿದಾನ ಪುಸ್ತಕ ತೋರಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇಂದಿರಾ ಗಾಂಧಿ 1975ರಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಏಕಾಏಕಿ ತುರ್ತು ಪರಿಸ್ಥಿತಿ ಘೋಷಿಸಿದರು. ಎಲ್ಲ ವ್ಯವಸ್ಥೆಗಳನ್ನೂ ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದರು. ಅದನ್ನು ವಿರೋಧಿಸುವವರನ್ನು ಬಂಧಿಸಲಾಯಿತು. ದೇಶದಲ್ಲಿ ಪ್ರತಿಪಕ್ಷವೇ ಇರಬಾರದು ಎಂಬುದು ಇಂದಿರಾ ಗಾಂಧಿ ಅವರ ಇಂಗಿತವಾಗಿತ್ತು ಎಂದು ಹೇಳಿದರು.
ಈಗ ಕಾಂಗ್ರೆಸ್‌ನವರು ಮೋದಿ ಸಂವಿಧಾನ ಬದಲಾಯಿಸುತ್ತಾರೆ ಎಂದು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ವಾಸ್ತವ ಸಂಗತಿ ಏನೆಂದರೆ ಕಾಂಗ್ರೆಸ್ ಅವಧಿಯಲ್ಲೇ ಅತಿ ಹೆಚ್ಚು ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ. ಈಗ ಸಂವಿಧಾನದ ಬಗ್ಗೆ ಇನ್ನಿಲ್ಲದ ಕಾಳಜಿ ತೋರುತ್ತಿರುವ ರಾಹುಲ್ ಗಾಂಧಿ ಅವರು ತನ್ನ ಅಜ್ಜಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಮಾಡಿದ್ದ ಪ್ರಮಾದಕ್ಕೆ ದೇಶದ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಹೃಷಿಕೇಶ್ ಪೈ, ರಮೇಶ್, ಶ್ರೀನಿವಾಸ ರೆಡ್ಡಿ, ಭವಾನಿರಾವ್ ಮೋರೆ, ಹರೀಶ್, ಲಿಂಗರಾಜ್, ವಿನ್ಸೆಂಟ್ ರೋಡ್ರಿಗಸ್, ರತ್ನಾಕರ್ ಶೆಣೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net