ಡಿಕೆಶಿ-ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿ ಕನಸು: ಈಶ್ವರಪ್ಪ ವ್ಯಂಗ್ಯ

kseeeee
Published on

ಶಿವಮೊಗ್ಗ: ಇನ್ನೂ ಹೆಣ್ಣು ನೋಡಿಲ್ಲ, ನಿಶ್ಚಿತಾರ್ಥವಾಗಿಲ್ಲ. ಆಗಲೇ ಮಗುವಿನ ನಾಮಕರಣ ಮಾಡಲು ಮುಂದಾದರು ಎನ್ನುವಂತಾಗಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಥಿತಿ. ಚುನಾವಣೆ ನಡೆದು ಫಲಿತಾಂಶವೇ ಬಂದಿಲ್ಲ. ಆಗಲೇ ಇವರಿಬ್ಬರೂ ಸಿಎಂ ಕುರ್ಚಿ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಸಿದ್ದರಾಮೋತ್ಸವ, ಶಿವಕುಮಾರೋತ್ಸವದ ಮೂಲಕ ಇಬ್ಬರೂ ಪರಸ್ಪರ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ವ್ಯಕ್ತಿ ಪೂಜೆ ಮಾಡಬೇಡಿ, ಪಕ್ಷದ ಪೂಜೆ ಮಾಡಿ ಎನ್ನುವ ಡಿ.ಕೆ.ಶಿವಕುಮಾರ್, ಒಕ್ಕಲಿಗರ ಸಭೆಯಲ್ಲಿ ಮುಂದೆ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಎಂದುಕೊಳ್ಳುವ ಸಿದ್ದರಾಮಯ್ಯ 75 ಕೋಟಿ ರೂ. ವೆಚ್ಚದಲ್ಲಿ ಜನ್ಮದಿನೋತ್ಸವ ಆಚರಿಸಿಕೊಳ್ಳುವ ಮೂಲಕ ಮಜಾವಾದಿ ಎನಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮೋತ್ಸವ ಆರಂಭವಷ್ಟೇ. ಮುಂದೆ ಕಾಂಗ್ರೆಸ್‌ನಲ್ಲಿ ಇನ್ನಷ್ಟು ನಾಟಕಗಳು ನಡೆಯಲಿವೆ. ಕೊನೆಯ ಚುನಾವಣೆ ಎನ್ನುವುದು ಸಿದ್ದರಾಮಯ್ಯ ಅವರ ಹೊಸ ನಾಟಕವಷ್ಟೇ. ಮುಂದಿನ ಚುನಾವಣೆಯಲ್ಲಿ ಅವರು ಮುಸಲ್ಮಾನರ ಪ್ರಾಬಲ್ಯವಿರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಿಂದುಗಳು ಬಹುಸಂಖ್ಯಾತರಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅವರು ನಿಶ್ಚಿತವಾಗಿಯೂ ಗೆಲ್ಲುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net