ಕಾಂಗ್ರೆಸ್ ಸಾಧನಾ ಸಮಾವೇಶ ಹಾಸ್ಯಾಸ್ಪದ: ಆರಗ

bjp
ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರವನ್ನು ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಜಗದೀಶ್, ಹರಿಕೃಷ್ಣ, ಜ್ಯೋತಿಪ್ರಕಾಶ್, ಮಾಲತೇಶ್, ಅಣ್ಣಪ್ಪ, ಚಂದ್ರಶೇಖರ್ ಮತ್ತಿತರರು ಬಿಡುಗಡೆ ಮಾಡಿದರು.
Published on

ಶಿವಮೊಗ್ಗ: ಸಾಧನಾ ಶೂನ್ಯವಾದ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿರುವುದು ವಿಪರ್ಯಾಸ. ಹಗರಣಗಳು, ಜನವಿರೋಧಿ ಆಡಳಿತವೇ ಈ ಸರ್ಕಾರದ ಸಾಧನೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.

ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದು ಜನರಿಗೆ ಶಾಪವಾಗಿ ಪರಿಣಮಿಸಿದೆ. ನಿತ್ಯವೂ ಜನರ ಸುಲಿಗೆ ನಡೆಯುತ್ತಿದೆ. ನುಡಿದಂತೆ ನಡೆದಿದ್ದೇವೆ ಎಂದು ಆಗಾಗ ಬೊಬ್ಬೆ ಹಾಕುವ ಸಿಎಂ ಸಿದ್ದರಾಮಯ್ಯ ಅತ್ಯಂತ ಕೆಟ್ಟ ಆಡಳಿತ ನೀಡುತ್ತಿದ್ದಾರೆ. ಇದನ್ನು ಮರೆಮಾಚಲು ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ದೂರಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಪ್ರಯಾಣ, ಮಾಸಿಕ ಎರಡು ಸಾವಿರ ರೂ. ನೀಡಿ ಅದಕ್ಕಿಂತಲೂ ಹೆಚ್ಚಿನ ಹಣವನ್ನು ಪುರುಷರ ಜೇಬಿನಿಂದ ಕಿತ್ತುಕೊಳ್ಳಲಾಗುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಿ ಪಕ್ಷದ ಕಾರ್ಯಕರ್ತರಿಗೆ ಸಂಬಳ ನೀಡುವ ಮೂಲಕ ಸರ್ಕಾರದ ಹಣವನ್ನು ದಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಹಾಗೂ ಡಿಸಿಎಂ ನಡುವಿನ ಮೇಲಾಟದಲ್ಲಿ ಎಲ್ಲವೂ ತಾಳತಪ್ಪಿದೆ. ಇರುವಷ್ಟು ದಿನ, ಸಾಧ್ಯವಾದಷ್ಟು ಸುಲಿಗೆ ಮಾಡೋಣ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದಂತಿದೆ. ಈ ಸರ್ಕಾರ ಆದಷ್ಟು ಬೇಗ ತೊಲಗಿದರೆ ಮಾತ್ರ ರಾಜ್ಯದ ಜನರು ಬದುಕುಳಿಯಬಹುದು ಎಂದರು.

ಸರ್ಕಾರದ ವೈಫಲ್ಯಗಳ ಭಿತ್ತಿಪತ್ರವನ್ನು ಬಿಜೆಪಿ ಮುಖಂಡರು ಇದೇ ಸಂದರ್ಭ ಬಿಡುಗಡೆ ಮಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಎಂ.ಬಿ.ಹರಿಕೃಷ್ಣ, ವಕ್ತಾರ ಜ್ಯೋತಿಪ್ರಕಾಶ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net