

ಚಳ್ಳಕೆರೆ: ಚುನಾವಣಾ ಸಂದರ್ಭದಲ್ಲಿ ಜನತೆಗೆ ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಕಂಬಳಿ ಮಾರುಕಟ್ಟ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಬಡ-ಮಧ್ಯಮ ಕುಟುಂಬದ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ. ತಾಲೂಕಿನ 77,899 ಫಲಾನುಭವಿಗಳಿಗೆ ಮಾಸಿಕ ತಲಾ 2 ಸಾವಿರ ಸಿಗಲಿದೆ. ಕೆಲ ದಾಖಲೆ ಸಮಸ್ಯೆಯಿಂದ ಹೊರಗುಳಿದಿರುವ 12 ಸಾವಿರ ಮಂದಿಯನ್ನು ನೋಂದಣಿ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
ಸಂವಿಧಾನಬದ್ಧವಾಗಿ ಬಡಜನರಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
2013ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 160 ಭರವಸೆಗಳನ್ನು ಈಡೇರಿಸಿ ಯಶಸ್ವಿ ಆಡಳಿತ ಮಾಡಲಾಗಿತ್ತು. ಅದೇ ರೀತಿ ಪ್ರಸ್ತುತ ಸರ್ಕಾರದಿಂದ ಬಡಜನರ ಕಲ್ಯಾಣ ಕಾರ್ಯಗಳು ನಡೆಯುವುದು ಖಚಿತ ಎಂದರು.
ಸಿಡಿಪಿಒ ಸಿ.ಹರಿಪ್ರಸಾದ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮವನ್ನು ಫಲಾನುಭವಿಗಳಿಗೆ ತಿಳಿಪಡಿಸಲು ನಗರದ ರಹೀಂನಗರದ ಶಾದಿಮಹಲ್, ನಗರಸಭಾ ಕಲ್ಯಾಣ ಮಂಟಪ, ಶ್ರೀರಾಮ ಮಂದಿರ, ಛೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪ, ಕಂಬಳಿ ಮಾರುಕಟ್ಟೆ ಸಭಾಂಗಣ ಮತ್ತು ಅಂಬೇಡ್ಕರ್ ಭವನ ಸೇರಿದಂತೆ ಗ್ರಾಮಾಂತರ ಭಾಗದ 40 ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನದಲ್ಲಿ ಫಲಾನುಭವಿಗಳಿಗೆ ನೇರ ಪ್ರಸಾರ ವೀಕ್ಷಣೆಗೆ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ರೇಹಾನ್ ಪಾಷಾ, ಪೌರಾಯುಕ್ತ ಸಿ. ಚಂದ್ರಪ್ಪ, ನಗರಸಭಾ ಸದಸ್ಯರಾದ ಆರ್. ಮಂಜುಳ, ಸಿ.ಬಿ. ಜಯಲಕ್ಷ್ಮಿ, ಎಂ.ಜೆ. ರಾಘವೇಂದ್ರ, ಕೆ. ವೀರಭದ್ರಯ್ಯ, ಕೆ.ಸಿ. ನಾಗರಾಜ, ಟಿ. ಮಲ್ಲಿಕಾರ್ಜುನ, ಚಳ್ಳಕೆರಪ್ಪ, ಬಿ.ಟಿ. ರಮೇಶ್‌ಗೌಡ ಮತ್ತಿತರರು ಇದ್ದರು.
ವೃದ್ಧೆಯ ಕಾಲಿಗೆ ಬಿದ್ದ ಶಾಸಕ: ಪ್ರತಿ ತಿಂಗಳು ಎರಡು ಸಾವಿರದ ಆದೇಶ ಪತ್ರ ಪಡೆದ ವೃದ್ಧೆಯೊಬ್ಬರು ಭಾವುಕರಾಗಿ, ಸ್ವಾಮಿ ನಮ್ಮಂತಹ ಬಡವರಿಗೆ ಬಹಳಷ್ಟು ಅನುಕೂಲ ಆಗುತ್ತೇ. ಪುಣ್ಯದ ಕೆಲಸ ಮಾಡಿದ ನಿಮ್ಮನ್ನು ದೇವರು ಸದಾ ಕಾಪಾಡಲಿ ಎಂದು ಶಾಸಕರಿಗೆ ನಮಸ್ಕರಿಸಲು ಮುಂದಾಗುತ್ತಿದ್ದಂತೆ, ಅಜ್ಜಿಯ ಕೈ ಹಿಡಿದು, ಕಾಲಿಗೆ ಬಿದ್ದು ನಮಸ್ಕರಿಸಿದ ರಘುಮೂರ್ತಿ, ನಿಮ್ಮಂತಹ ಹಿರಿಯರ ಆಶೀರ್ವಾದ ನನ್ನ ಹಾಗೂ ಪಕ್ಷದ ಮೇಲೆ ಇರಲಿ ಎಂದು ಹೇಳಿದರು.