ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ವಿರುದ್ಧ ಹರಿಹಾಯ್ದ ಕಾಂಗ್ರೆಸಿಗರು

Congress-road-show
Published on

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯರು, ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆಯ ಮೂಲಕ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಭಟ್ಕಳದಿಂದ ಮುಂಡಗೋಡ, ಹಳಿಯಾಳ, ಜೊಯಿಡಾದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಕಿತ್ತೂರು- ಖಾನಾಪುರ ತಾಲೂಕಿನಿಂದಲೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದರು. ಕಾಂಗ್ರೆಸ್ ಪಕ್ಷದ  ಶಾಲು, ಬಾವುಟ ಹಿಡಿದು ಕಾಂಗ್ರೆಸ್ ಪರ, ಡಾ.ಅಂಜಲಿ ಅವರ ಪರ  ಘೋಷಣೆಗಳನ್ನು ಕೂಗಿದರು. 

ಮೆರವಣಿಗೆಗೂ ಮುನ್ನ ಡಾ.ಅಂಜಲಿ ಹಾಗೂ ಪಕ್ಷದ ಮುಖಂಡರು ಇಲ್ಲಿನ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಮೆರವಣೆಗೆಯು ಹೆಂಜಾ ನಾಯ್ಕ ವೃತ್ತ, ಸವಿತಾ ವೃತ್ತ, ಸುಭಾಷ ವೃತ್ತದ ಮೂಲಕ ಗ್ರೀನ್ ಸ್ಟ್ರೀಟ್ ರಸ್ತೆಯಯಲ್ಲಿ ಸಾಗಿ  ಅಂಬೇಡ್ಕರ್ ವೃತ್ತ ತಲುಪಿತು.

ಮೆರವಣಿಗೆಯ ವೇಳೆಯೇ ಮಾತನಾಡಿದ ಡಾ.ಅಂಜಲಿ ನಿಂಬಾಳ್ಕರ, ಕಿತ್ತೂರು- ಖಾನಾಪುರದ ಜನರು ಹಿಂದೆ ಇದ್ದ ಬಿಜೆಪಿ ಸಂಸದರ ಫೋಟೋ ಕೂಡ ನೋಡಿಲ್ಲ. ಐದು ವರ್ಷ ಶಾಸಕಿಯಾಗಿದ್ದ ನಾನು ಅವರಿಗಿಂತ ಹೆಚ್ಚಿನ ಕೆಲ ಮಾಡಿದ್ದೇನೆ. ಇದೀಗ ನಿಮ್ಮ ಧ್ವನಿಯಾಗಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಪಕ್ಷದ ಕಾರ್ಯರ್ತರು ಮನೆ ಮನೆಗಳಿಗೆ ತೆರಳಿ ಪಕ್ಷದ ಸಿದ್ಧಾಂತವನ್ನು ಹಾಗೂ  ಯೋಜನೆಗಳ ಬಗ್ಗೆ ತಿಳಿಸಬೇಕು ಎಂದು ಕರೆಕೊಟ್ಟರು. 

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಮಾತನಾಡಿ, ಬಿಜೆಪಿಯವರು ಮುಂದಿನ 25 ವರ್ಷವನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಹಾಗೆಯೇ ಅವರ ಪ್ರಣಾಳಿಕೆಯೂ ಇದೆ. ಆದರೆ ಅಲ್ಲಿವರೆಗೆ ಜನರು ಏನು ಮಾಡಬೇಕು? ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದೇ 2047ರ ಭಾರತದ ಕನಸು ಕಾಣುವುದು ದಡ್ಡತನ ಎಂದರು. 

ಕಾಂಗ್ರೆಸ್ ಪಕ್ಷವು ಕಚೇರಿಯಲ್ಲಿ ಕುಳಿತು ಪ್ರಣಾಳಿಕೆ ತಯಾರಿಸಿಲ್ಲ. ಜನರೊಂದಿಗೆ ಬೆರೆತು, ಅವರ ಕಷ್ಟಗಳನ್ನು ಅರಿತು, ಅವರ ಅಭಿವೃದ್ಧಿಗಾಗಿ ಪ್ರಣಾಳಿಕೆ ಯನ್ನು ತಯಾರಿಸಿದೆ. ಅದರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು. 

ಶಾಸಕ ಆರ್.ವಿ ದೇಶಪಾಂಡೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವು ಉದ್ಯೋಗದ ಜತೆಗೆ ಕಾರ್ಮಿಕರು, ಮಹಿಳೆಯರು ಹಾಗೂ ರೈತರಿಗೆ ಉಪಯೋಗವಾಗುವ ಗ್ಯಾರಂಟಿಗಳನ್ನು ನೀಡಿದೆ.

 ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ. ಮೋದಿ ಗ್ಯಾರಂಟಿ ಎಂದು ಪ್ರಚಾರಕ್ಕೆ‌ಇಳಿದಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ‌ಆರ್.ವಿ.ದೇಶಪಾಂಡೆ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ 400 ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿಗರು ಪ್ರಚಾರಕ್ಕೆ ಇಳಿದಿದ್ದಾರೆ. ಗೆಲ್ಲುವುದಿಲ್ಲ ಎಂದು ತಿಳಿದು ಕಾಂಗ್ರೆಸ್ ಸರ್ಕಾರದ ಸಾಧನೆ ನೋಡಿ ತಾವೂ ಗ್ಯಾರಂಟಿ ಕೊಡುತ್ತೇವೆಂದು ಜನರ ಮುಂದೆ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಆದರೆ ರಾಜ್ಯದಲ್ಲಿ ಬರ ತೀವ್ರತರವಿದೆ. ಅಲ್ಲದೇ ‌ಜನರ ಸಮಸ್ಯೆ ಸಾಕಷ್ಟು ಇದ್ದರೂ ಒಂದೇ ಒಂದು ಶಬ್ದ ಇದರ ಬಗ್ಗೆ ಉಚ್ಛರಿಸಿಲ್ಲ. ರಾಜ್ಯದ ಜನರಿಂದ ತೆರಿಗೆ ಪಡೆದು ಅದನ್ನ ಅನುದಾನವಾಗಿ ನೀ ಮಡದೇ, ರಾಜ್ಯದ ಜನರು ಸಮಸ್ಯೆಗೆ ಸಿಲುಕುವಂತೆ ಮಾಡಿದ್ದು ಕೇಂದ್ರ ಸರ್ಕಾರ ಎಂದರು.

ಸದ್ಯ ಬರಗಾಲ ರಾಜ್ಯದಲ್ಲಿ ಇದೆ. ಕೇಂದ್ರದಿಂದ ಒಂದು ರೂಪಾಯಿ ಹಣವನ್ನ ಬಿಡುಗಡೆ ಮಾಡಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವುದು ತಿಳಿದು ಹಣ ನೀಡದೆ ಜನರನ್ನ‌ ಸಂಕಷ್ಟಕ್ಕೆ ಸಿಲುಕಿ ಕಾಂಗ್ರೆಸ್ ಹೆಸರಿಗೆ ಕಪ್ಪು ಚುಕ್ಕೆ ತರುವಂತೆ ಮಾಡುತ್ತಿದೆ ಎಂದು ಕಿಡಿಕಾರಿದರು. 

ಮೋದಿ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವಿದ್ಯಾಭ್ಯಾಸ ಮಾಡಿದ ನಂತರ ಯುವಕರು ಕೆಲಸ ಸಿಗದೇ ಮನೆಯಲ್ಲಿ ಕೂರುವ ಪರಿಸ್ಥಿತಿ ಇದೆ.‌ ರಾಜ್ಯದಲ್ಲಿ ಇಂತಹ ಸಮಸ್ಯೆಯನ್ನ ಮನಗಂಡ ಕಾಂಗ್ರೆಸ್ ರಾಜ್ಯದಲ್ಲಿ ಯುವ ನಿಧಿ ನೀಡುವ ಮೂಲಕ ಯುವಕರ ಏಳಿಗೆಗೆ ಸಹಕಾರಿಯಾಗುವ ಕಾರ್ಯಕ್ರಮ ಚಾಲನೆ ತಂದಿದೆ. ರೈತರ, ಮಹಿಳೆಯರ, ಯುವಕರ, ಶ್ರಮಿಕರ ಪರ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿ ಈಡೇರಿಸುತ್ತೇವೆ. ರಾಜ್ಯದಲ್ಲಿ ಮಾತು ಕೊಟ್ಟಂತೆ  ಗ್ಯಾರಂಟಿ ಜಾರಿಗೆ ತಂದಿದ್ದು ಹಾಗೇ ಕೇಂದ್ರದಲ್ಲೂ ತರಲಿದ್ದೇವೆ. ಈ ಬಾರಿ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಸಿಲನ್ನು ಲೆಕ್ಕಿಸದೇ ಜನರು ಬಂದಿರುವುದನ್ನ ನೋಡಿದರೆ ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯಲ್ಲಿ 30 ವರ್ಷ ಬಿಜೆಪಿ ಸಂಸದರಿದ್ದರೂ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಬಿಜೆಪಿಯಲ್ಲಿ ಸಂಸದರಿಂದ ಪ್ರಧಾನಿಯವರೆಗೂ ಸುಳ್ಳು ಹೇಳಿದ್ದು ಬಿಟ್ಟು ಬೇರೇನೂ ಮಾಡಿಲ್ಲ. ಹೀಗಾಗಿ ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. 

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಿಂದ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದ್ದಾರೆ. ಧರ್ಮ, ಜಾತಿ ನಡುವೆ ದ್ವೇಷ ತಂದಿಟ್ಟು ಚುನಾವಣೆ ಮಾಡುತ್ತಿದ್ದಾರೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸಹ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು‌.

ಕಾಂಗ್ರೆಸ್ ಕಾರ್ಯಕರ್ತರು ಉರಿ ಬಿಸಿಲಲ್ಲಿ ಸಹ ಉತ್ಸಾಹ ಕಳೆದುಕೊಳ್ಳದೆ ಮೆರವಣಿಗೆಯಲ್ಲಿದ್ದರು. ಕಾರ್ಯಕರ್ತರು ಕೆಲವರು ಬಿಸಿಲ ಝಳಕ್ಕೆ ರಸ್ತೆ ಬದಿಯಲ್ಲಿದ್ದ ಮರಗಳ ನೆರಳಿನಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದವು. 

ಶಾಸಕ ಸತೀಶ ಸೈಲ್, ಶಾಸಕ ಬಾಬಾ ಸಾಹೇಬ ಪಾಟೀಲ, ಕಾಂಗ್ರೆಸ್  ಮುಖಂಡ ನಿವೇದಿತ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ, ಮೀನುಗಾರ ಮುಖಂಡ ರಾಜು ತಾಂಡೇಲ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net