

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಂಗ್ರೆಸ್ನವರಿಗೆ ಹಿಂದು ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬರುತ್ತವೆ. ತಮ್ಮ ಬಾಂಧವರು ದಿನಪೂರ್ತಿ ಇಡೀ ಊರು ಕೇಳುವಂತೆ ಮೈಕ್ ಹಾಕಿ ಕೂಗಬಹುದು. ಆದರೆ ಹಿಂದುಗಳು ವರ್ಷಕ್ಕೊಮ್ಮೆ ಹಬ್ಬ, ಹರಿದಿನಗಳಲ್ಲಿ ಮೈಕ್, ಡಿಜೆ ಹಾಕುವಂತಿಲ್ಲ ಎಂಬ ಆದೇಶ ಹೊರಡಿಸುತ್ತಾರೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ದೂರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗಣೇಶೋತ್ಸವದಲ್ಲಿ ವಿತರಿಸುವ ಪ್ರಸಾದವನ್ನು ಎಫ್ಎಸ್ಎಸ್ಎಐ ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ಮಾತ್ರ ಸಿದ್ಧಪಡಿಸಬೇಕು ಎಂಬ ನಿಯಮ ಬೀದಿಬದಿಯಲ್ಲಿ ಮಾಂಸ ಮಾರಾಟ ಮಾಡುವವರಿಗೆ ಏಕಿಲ್ಲ. ಅನ್ಯಕೋಮಿನ ಹಬ್ಬಗಳಲ್ಲಿ ನೀಡುವ ಬಾಡೂಟಕ್ಕೆ, ಇಫ್ತಾರ್ ಕೂಟಕ್ಕೆ ಏಕೆ ಅನ್ವಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದ ಕೃಪಾಪೋಷಿತ ಇಂದಿರಾ ಕ್ಯಾಂಟೀನ್, ನೀವು ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿನ ಆಹಾರದ ಶುಚಿತ್ವ ಪರಿಶೀಲನೆ ಮಾಡಿಸಿದ್ದೀರಾ? ಯಾವುದೇ ನಿಯಮಗಳು ಕೇವಲ ಒಂದು ಕೋಮು ಅಥವಾ ಒಂದು ಧರ್ಮಕ್ಕೆ ಕೆಲ ಸಮಯಕ್ಕೆ ಮಾತ್ರ ಮೀಸಲಾಗಿರಬಾರದು ಹಾಗೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬಾರದು. ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.