

ಮಳವಳ್ಳಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಭಾನುವಾರ ಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ತಾಲೂಕು ಪಂಚಾಯಿತಿಯಿಂದ ಅನಂತರಾಮ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ರಾಜ್ಯಪಾಲರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು. ಈ ವೇಳೆ ಕೆಲ ಕಾರ್ಯಕರ್ತರು ರಸ್ತೆಯಲ್ಲಿಯೇ ಉರುಳುಸೇವೆ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅತ್ಯಂತ ಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಕೈಗೊಂಬೆಯಾಗಿರುವ ರಾಜ್ಯಪಾಲರ ನಡೆ ಸರಿಯಲ್ಲ. ವಾಮಮಾರ್ಗದ ಮೂಲಕ ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ವಿಪಕ್ಷ ನಡೆಸುತ್ತಿರುವ ಪ್ರಯತ್ನಕ್ಕೆ ರಾಜ್ಯದ ಜನ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ರಾಜ್ಯಪಾಲರು ಹಿಂದಿನ ಬಿಜೆಪಿಯ ಅನೇಕ ಮಂತ್ರಿಗಳ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆಗೆ ಅನುಮತಿ ನೀಡಿಲ್ಲ. ಬದಲಾಗಿ ಅಹಿಂದ ನಾಯಕ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಂದಿಸುವ ದೃಷ್ಟಿಯಿಂದ ಉದ್ದೇಶ ಪೂರ್ವಕವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಒತ್ತಾಯದಂತೆ ತನಿಖೆಗೆ ಆದೇಶ ನೀಡುವ ಮೂಲಕ ಸಂವಿಧಾನದ ಆಶಯಗಳ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಜು, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ಎಂ.ಆರ್.ರಾಜಶೇಖರ್, ಪ್ರಮೀಳಾ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ, ಆರ್.ಎನ್.ವಿಶ್ವಾಸ್, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾರಾಜು, ಸಿ.ಮಾಧು, ಕೆ.ಜೆ.ದೇವರಾಜು, ಎಚ್.ಬಿ.ಬಸವೇಶ್, ಮುಟ್ಟನಹಳ್ಳಿ ಅಂಬರೀಶ್, ಸವಿತಾ, ಎಚ್.ಕೆ.ಕೃಷ್ಣಮೂರ್ತಿ, ಶಿವಮೂರ್ತಿ, ಕಿರಣ್ ಶಂಕರ್, ಕೆ.ಶ್ರೀನಿವಾಸ್, ಬಂಕ್ ಮಹದೇವು, ದಿಲೀಪ್ ಕುಮಾರ್(ವಿಶ್ವ), ಟಿ.ಎಂ.ಪ್ರಕಾಶ್ ಇತರರಿದ್ದರು
ರಾಜ್ಯಪಾಲರ ವಿರುದ್ಧ ಪಿಎಂಎನ್ ಟೀಕಾಪ್ರಹಾರ: ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡವ ಅರ್ಜಿ ಕೊಡುತ್ತಾನೆ. ಆತನ ಅರ್ಜಿ ಪಡೆದು ನೋಟಿಸ್ ಕೊಡ್ತೀರಲ್ಲಪ್ಪ. ರಾಜ್ಯಪಾಲ ಆಗುವುದಕ್ಕೆ ಅರ್ಹತೆ ಇಲ್ಲ ಎಂದು ಥಾವರ್‌ಚಂದ್ ಗೆಹಲೋತ್ ವಿರುದ್ಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವುದಕ್ಕೆ ಲೋಕಾಯುಕ್ತ ಕೇಳಿದ್ದಾರೆ. ಆದರೆ ಎಂಟು ತಿಂಗಳಿಂದ ಕಾಲಹರಣ ಮಾಡುತ್ತಿದ್ದೀಯಾ. ಮುರುಗೇಶ್ ನಿರಾಣಿಯ ಹಗರಣಗಳಿವೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿಚಾರದಲ್ಲಿ ಸುಮ್ಮನೆ ಕುಳಿತ್ತೀದಿಯಲ್ಲಪ್ಪ. ನಿಮಗೆ ತಾಕತ್ತಿದ್ದರೆ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ತಪ್ಪು ಮಾಡಿದ್ದರೆ ಅವರ ಜತೆ ನಮಗೂ ಶಿಕ್ಷೆ ಕೊಡು. ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಹೇಡಿಗಳಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 136 ಸೀಟು ಗೆದ್ದರು ಎಂದು ಕುಮಾರಸ್ವಾಮಿಗೆ ಹೊಟ್ಟೆ ಕಿಚ್ಚು. ಗುಡುಗುಡು ಎಂದು ಓಡಿಹೋಗಿ ಮೋದಿ ಕಾಲು ಕಟ್ಟಿಕೊಂಡು ಬಿಜೆಪಿ ಜತೆ ಸೇರಿದ್ದೀಯಾ. ಕುಮಾರಸ್ವಾಮಿ ನಿನಗೆ ಸಿದ್ದರಾಮಯ್ಯರನ್ನು ಅಲುಗಾಡಿಸಲು ಆಗಲ್ಲ. ನಿಮ್ಮ ಮೋದಿ, ಅಮಿತ್ ಷಾ ಹೇಡಿತನದ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಆಡಳಿತ ನೋಡಿದರೆ ನಿಮ್ಮದು ವಂಚನೆ, ದ್ರೋಹ, ಸ್ವಜನ ಪಕ್ಷಪಾತ ತುಂಬಿದೆ ಎಂದು ತಿಳಿಯುತ್ತೆ ಎಂದು ಕಿಡಿಕಾರಿದರು.