ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

mng--25 April congrss protest
Published on

ಮಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಭೀಕರ ದಾಳಿಯನ್ನು ಖಂಡಿಸಿ ಮತ್ತು ಹುತಾತ್ಮರಾದವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಶುಕ್ರವಾರ ಮೊಂಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದರ ಮಾಜಿ ಸಚಿವ ಬಿ.ರಮಾನಾಥ ರೈ, ಅಮಾಯಕರ ಮೇಲೆ ಭಯೋತ್ಪಾದಕರು ಅತ್ಯಂತ ಅಮಾನುಷವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಖಂಡನೀಯ. ಇಂತಹ ಕೃತ್ಯದಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗಿದೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನುಡಿನಮನ ಸಲ್ಲಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಭಾರತದ ಏಕತೆಯನ್ನು ಸಹಿಸದ ಪಾಕಿಸ್ತಾನ ಕಾಶ್ಮೀರದ ಪ್ರವಾಸಿಗರ ಮೇಲೆ ಘನಘೋರ ಕೃತ್ಯ ಎಸಗಿದೆ. ಭಯೋತ್ಪಾದನೆಗೆ ಜಾತಿ-ಧರ್ಮವಿಲ್ಲ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ನಿಲ್ಲಬೇಕು ಮತ್ತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಯೋತ್ಪಾದಕರ ಹೇಯ ಕೃತ್ಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿದರು.

ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಭಾಸ್ಕರ್.ಕೆ, ಮುಖಂಡರಾದ ಅಬ್ದುಲ್ ರವೂಫ್, ಕೆ.ಪಿ.ಥೋಮಸ್, ಪಿಯೂಸ್ ರೋಡ್ರಿಗಸ್, ಅಶ್ರಫ್.ಕೆ, ಕೆ.ಅಪ್ಪಿ, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಟಿ.ಹೊನ್ನಯ್ಯ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ವಿಕಾಶ್ ಶೆಟ್ಟಿ, ಬೇಬಿ ಕುಂದರ್, ಶುಭೋದಯ ಆಳ್ವ, ಅಶ್ರಫ್ ಬಜಾಲ್, ವಿಶ್ವಾಸ್ ಕುಮಾರ್ ದಾಸ್, ಕೇಶವ ಮರೋಳಿ, ಶಂಸುದ್ದೀನ್ ಕುದ್ರೋಳಿ, ಶಂಸುದ್ದೀನ್ ಬಂದರ್, ಪದ್ಮನಾಭ ಅಮೀನ್ ಮತ್ತಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net