

ಮೈಸೂರು: ಕೇಂದ್ರ ಸರ್ಕಾರ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮೈಸೂರು ಗ್ರಾಮಾಂತರ ಯುವ ಕಾಂಗ್ರೆಸ್‌ನಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಬಿಜೆಪಿಯವರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಆದರೆ ಜನಾಕ್ರೋಶ ಯಾತ್ರೆ ಮಾಡಬೇಕಿರುವುದು ಕೇಂದ್ರ ಸರ್ಕಾರ ವಿರುದ್ಧ ಎಂದು ಕಿಡಿಕಾರಿದರು.
ತಮ್ಮದೇ ಆಡಳಿತ ನಡೆಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನು 50 ರೂ. ಏರಿಕೆ ಮಾಡಿದೆ. ಪೆಟ್ರೋಲ್, ಡೀಸೆಲ್ ಸುಂಕವನ್ನು 2 ರೂ ಹೆಚ್ಚಿಸಿದೆ. ಟೋಲ್, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ದೂರಿದರು.
ಹಲವು ರಾಜ್ಯಗಳ ಚುನಾವಣೆ ಕಾರಣಕ್ಕೆ ಸುಮ್ಮನಿದ್ದ ಕೇಂದ್ರ ಸರ್ಕಾರ ಇದೀಗ ಬೆಲೆ ಏರಿಕೆ ಮಾಡಿ ಲೂಟಿ ಹೊಡೆಯಲು ಮುಂದಾಗಿದೆ. ಅಚ್ಛೇ ದಿನ್ ಎಂದು ಹೇಳುತ್ತಿದ್ದ ಬಿಜೆಪಿ ಎಲ್ಲಿ ನಿಮ್ಮ ಅಚ್ಛೇ ದಿನಗಳು ಎಂದು ಕಿಡಿ ಕಾರಿದರು.
ಬಿಜೆಪಿ ಸರ್ಕಾರ ಜನರಿಗೆ ನರಕ ದರ್ಶನ ಮಾಡಿಸುತ್ತಿದೆ. ದೇಶದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ಪಕೋಡ ಮಾರೋಣವೆಂದರೆ ಗ್ಯಾಸ್, ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ ಎಂದರು.
ಬಿಜೆಪಿಯವರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡಲು ಯಾವ ವಿಷಯವೂ ಇಲ್ಲ. ಕಾಂಗ್ರೆಸ್ ಜನಪರವಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳ ಜನಪ್ರಿಯತೆ ಸಹಿಸದೆ ಹೊಟ್ಟೆಕಿಚ್ಚಿನಿಂದ ಈ ರೀತಿಯ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಬಿಜೆಪಿ ನಾಯಕರು ಕೇಂದ್ರ ಮೇಲೆ ಒತ್ತಡ ಹೇರಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿಸಲಿ ಎಂದು ಒತ್ತಾಯಿಸಿದರು.
ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶಶಾಂಕ್‌ಗೌಡ ದುದ್ದಗೆರೆ, ಉಪಾಧ್ಯಕ್ಷ ನವೀನ್, ಮುಖಂಡರಾದ ನಜ್ಮಾ ನಜೀರ್ ಚಿಕ್ಕನೇರಳೆ, ಕುಮಾರ, ರಾಜೇಶ್, ಶಿವರಾಜ್ ಇತರರು ಇದ್ದರು.
--------