

ಮಡಿಕೇರಿ: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ವಿಶ್ವವೇ ಕರೊನಾ ವಿರುದ್ಧ ಹೋರಾಡುತ್ತಿರುವಾಗ ರಾಜ್ಯ ಸರ್ಕಾರ ಮಾತ್ರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಕುರಿತು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ರೈತರ ಹಿತ ಕಾಪಾಡುವ ಉದ್ದೇಶದಿಂದ ತರಲಾಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ದೊಡ್ಡ ದೊಡ್ಡ ವ್ಯಾಪಾರಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ರೈತರನ್ನು ಸುಲಿಗೆ ಮಾಡಿ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದು, ಮಧ್ಯವರ್ತಿಗಳ ದಬ್ಬಾಳಿಕೆಗೆ ರೈತರು ಬಲಿಯಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೈಗಾರಿಕಾ ವಿವಾದಗಳ ಕಾಯ್ದೆಯಲ್ಲೂ ತಿದ್ದುಪಡಿ ತಂದು ಕಾರ್ಮಿಕರನ್ನು ಅತಂತ್ರದ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಕಾರ್ಮಿಕ ತುಟ್ಟಿ ಭತ್ಯ ಹೆಚ್ಚಳವನ್ನು ತಡೆದು ನಿರ್ಬಂಧಿಸಲಾಗಿದೆ. ಕರೊನಾ ಸಂಕಷ್ಟದ ಸ್ಥಿತಿಯಲ್ಲಿ ಕಾರ್ಮಿಕರಿಗೆ ಆರ್ಥಿಕವಾಗಿ ನೆರವು ನೀಡಿ ಮನಸ್ಥೈರ್ಯ ತುಂಬುವ ಬದಲು ಅವರನ್ನು ಅತಂತ್ರವಾಗಿಸುವ ಅನೇಕ ತಿದ್ದುಪಡಿಗಳನ್ನು ತರುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮಲೆನಾಡು, ಕರವಾಳಿ ಮತ್ತು ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದ್ದು, ಜನ, ಜಾನುವಾರು ಸಾವುನೋವುಗಳಿಂದ ನಷ್ಟ ಅನುಭಿಸಿದ್ದಾರೆ. ಕಳೆದ ವರ್ಷದ ಅತಿವೃಷ್ಟಿ ಸಂದರ್ಭ ರಾಜ್ಯ ಸರ್ಕಾರ ಹಲವಾರು ಪರಿಹಾರ ಕಾರ್ಯಕ್ರಮಗಳನ್ನು ಘೋಷಿಸಿ, ನಿರ್ದಿಷ್ಟ ಸಮಯದೊಳಗೆ ಜಾರಿಗೊಳಿಸುವುದಾಗಿ ಜನತೆಗೆ ಭರವಸೆ ನೀಡಿತು. ಆದರೆ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನತೆ ಎದುರಿಸುತ್ತಿರುವ ಸಂಕಷ್ಟವನ್ನು ನೋಡಿದ ಸರ್ಕಾರ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಪ್ರಮುಖರಾದ ಮಿಟ್ಟು ಚಂಗಪ್ಪ, ಟಿ.ಪಿ.ರಮೇಶ್, ನಟೇಶ್‌ಗೌಡ, ಆರ್‌ಎಂಸಿ ಮಾಜಿ ಅಧ್ಯಕ್ಷೆ ಜಯಂತಿ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಯೋಜಕ ತೆನ್ನಿರಾ ಮೈನಾ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.