ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

New Congress
Published on

ಹುಬ್ಬಳ್ಳಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ವಿಧಾನ ಪರಿಷತ್ ಸದಸ್ಯೆ ಸಿ.ಟಿ. ರವಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಕೇಶ್ವಾಪುರದ ಸವೋದಯ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಸವೋದಯ ವೃತ್ತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ ಅಭಿಮಾನಿಗಳ ಸಂಘ, ವೀರಶೈವ ಲಿಂಗಾಯತ ಸಮಾಜ, ಉಣಕಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕೃತಿ ದಹಿಸಿದರು.

ಹುಬ್ಬಳ್ಳಿ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಅಧ್ಯಕ್ಷ ವೀರೇಶ ಉಂಡಿ ಮಾತನಾಡಿ, ಲಕ್ಷೀ ಹೆಬ್ಬಾಳ್ಕರ ಅವರನ್ನು ಆಧುನಿಕ ರಾಣಿ ಚನ್ನಮ್ಮವೆಂದು ಕರೆಯುತ್ತೇವೆ. ಆದರೆ, ಅವರ ವಿರುದ್ಧ ಪರಿಷತ್ ಸದಸ್ಯ ಸಿ.ಟಿ. ರವಿ ಅಸಂವಿಧಾನಿಕ ಶಬ್ಧ ಬಳಕೆ ಮಾಡುವ ಮೂಲಕ ಮಹಿಳಾ ವಿರೋಧಿ ಸಂಸ್ಕೃತಿ ಮೆರೆದಿದ್ದಾರೆ. ತಕ್ಷಣ ಸಿ.ಟಿ. ರವಿ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಒತ್ತಾಯಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುನೀಲ ಮಠಪತಿ ಮಾತನಾಡಿ, ಸಿ.ಟಿ. ರವಿ ಅವರ ವರ್ತನೆ ಬಿಜೆಪಿ ಮಹಿಳೆಯರ ಪರ ಯಾವ ರೀತಿಯ ಧೋರಣೆ ತಾಳಿದೆ ಎಂಬುದನ್ನು ತೋರಿಸುತ್ತದೆ ಎಂದರು.

ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲಾವತಿ ದತ್ತವಾಡ, ಪಾಲಿಕೆ ಸದಸ್ಯರಾದ ಆರಿಫ ಭದ್ರಾಪುರ, ಇಕ್ಬಾಲ್ ನವಲೂರ, ಶಿವಕುಮಾರ ರಾಯನಗೌಡ್ರ, ಉಣಕಲ್ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಮೊಹಮ್ಮದ್ ಷರೀಫ್ ಗರಗದ ಮಾತನಾಡಿದರು.

ವೀರೇಶ ಕಡಕೊಳಮಠ, ಬಾತುಲ್ ಕಿಲ್ಲೇದಾರ, ಪ್ರಕಾಶ ಜಾಧವ, ಕಾಶಿಂ ಕೂಡಲ್ಗಿ, ಅಶೋಕ ಕಾಲದಗಿ, ಅಬ್ದುಲ್ ಗಣಿ ವಲಿಅಹ್ಮದ್, ಸಂತೋಷ ನಾಯಕ, ಗೀತಾ ಪಾಟೀಲ, ಹರೀಶ ಪೂಜಾರ, ಸೈಫ್ ಎರಗಟ್ಟಿ, ಭೀಮರಾಯ ರಾಯಪುರ, ಪ್ರಕಾಶ ಮಾಯಕರ್, ಪ್ರೇಮ ಜಾಧವ ಹಾಗೂ ಇತರರು ಇದ್ದರು.

ಹುಬ್ಬಳ್ಳಿ-ಧಾರವಾಡ ಮಹಾನರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಘೋಷಣೆ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net