

ಉಡುಪಿ: ತಹಶೀಲ್ದಾರ್ ಕಚೇರಿಗೆ ಅನೇಕ ಬಾರಿ ಭೇಟಿ ನೀಡುತ್ತಿದ್ದರೂ ಲಾನುಭವಿಗಳು ಜಾಗದ ಹಕ್ಕುಪತ್ರ ದೊರೆಯುತ್ತಿಲ್ಲ. ಬಿಜೆಪಿ ಶಾಸಕರು ಅಧಿಕಾರಿಗಳಿಗೆ ಹಕ್ಕುಚ್ಯುತಿ ಮಂಡಿಸುವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ತಿಂಗಳಾಂತ್ಯಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಜಿಲ್ಲೆಗೆ ಕರೆಯಿಸಿ ಅವರ ಮೂಲಕವೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ತಾಲೂಕು ಕಚೇರಿ ಮುಂಭಾಗ ಉಡುಪಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯಿಂದ ನಡೆದ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆ ಮೂಲಕ ಜನರ ಖಾತೆಗೆ ನೇರವಾಗಿ 1 ಲಕ್ಷ ಕೋಟಿಗೂ ಅಧಿಕ ಮೊತ್ತ ಜಮೆಯಾಗಿದೆ. ಮುಖ್ಯಮಂತ್ರಿಗಳು ಪ್ರತಿ ಕ್ಷೇತ್ರಕ್ಕೆ 50 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ. ಜನಸಾಮಾನ್ಯರು, ಬಡವರು, ಮಧ್ಯಮವರ್ಗದವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಿದೆ ಎಂದು ದೂರಿದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಿಜೆಪಿ ನೀಡಿದ ಭರವಸೆ ಪ್ರಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿದ್ದರೆ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ಜನರ ಮಧ್ಯೆ ಗೊಂದಲ ಸೃಷ್ಟಿಸಿ ಚುನಾವಣೆ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಶಾಸಕರು ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸುವ ಬದಲು ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಲಾನುಭವಿಗಳ ಆಯ್ಕೆ ಮಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ನಮ್ಮ ಅವಧಿಯಲ್ಲಿ ದಿನವಿಡೀ ಅಕ್ರಮ&ಸಕ್ರಮ ಸಭೆ ನಡೆಸಿ ಸಾಯಂಕಾಲದ ಹೊತ್ತಿಗೆ ಹಕ್ಕುಪತ್ರ ಮತ್ತು ಆರ್ಟಿಸಿ ಜೊತೆಗೆ ನೀಡುತ್ತಿದ್ದೆವು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಸಾದ್ ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಕಾಪು ( ದ ) ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೈ ಸುಕುಮಾರ್, ಕಾಪು ( ಉ ) ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂತೋಷ್ ಕುಲಾಲ್, ಮುಖಂಡರಾದ ಎಂ.ಎ. ಗೂರ್, ಹರೀಶ್ ಕಿಣಿ, ಪ್ರಖ್ಯಾತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.