ಸಂಸದರ ಅಮಾನತು ಮಾಡಿದ್ದಕ್ಕೆ ಖಂಡನೆ: ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Congress protest Mandya
Published on

ಮಂಡ್ಯ: ಸಂಸತ್ ಅಧಿವೇಶನದಿಂದ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಕಾವೇರಿ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು. ಸಂಸತ್‌ನ ಭದ್ರತೆ ಉಲ್ಲಂಘಿಸಿದ ಪ್ರಕರಣದ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಬೇಕು ಎಂದು ಉಭಯ ಸದನಗಳಲ್ಲಿ ಒತ್ತಾಯಿಸಿದ ವಿರೋಧ ಪಕ್ಷದ 146 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಸಂಸತ್‌ನಲ್ಲಿ ನಡೆದಿರುವ ಘಟನೆ ತಲೆತಗ್ಗಿಸುವ ವಿಚಾರ. ಇಷ್ಟು ಸಂಖ್ಯೆಯ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿರುವುದು ಇತಿಹಾಸದಲ್ಲೇ ಇಲ್ಲ. ಯಾರಿಗೂ ಗೊತ್ತಾಗದಂತೆ ಬಿಜೆಪಿಯ ತತ್ವ-ಸಿದ್ಧಾಂತ ಜಾರಿಗೆ ತರುತ್ತಿದ್ದಾರೆ. ವಿಚಾರಗಳನ್ನು ಚರ್ಚೆ ಮಾಡುವುದು, ವಿನಿಮಯ ಮಾಡುವುದು, ಅನುಷ್ಠಾನ ಮಾಡುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೂರಕ ಬೆಳವಣಿಗೆ. ಸಂಸತ್ ನಡೆಯುವಾಗ ಪ್ರಧಾನಿ, ಗೃಹ ಸಚಿವರು ಉತ್ತರ ಕೊಡಬೇಕಾಗುತ್ತದೆ. ಆದರೆ, ಇವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಕಿಡಿಕಾರಿದರು.

ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರಿ ಆಡಳಿತವೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಂಸತ್ ಮೇಲೆ ಕಿಡಿಗೇಡಿಗಳ ದಾಳಿ ನಡೆದರೆ, ವಿಪಕ್ಷಗಳ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ದಾಳಿ ಮಾಡುತ್ತಿದಾರೆ. ಸಂಸತ್ ರಕ್ಷಣೆ ಕೊಡಲು ವಿಫಲರಾಗಿದ್ದಾರೆ. ಉಭಯ ಸದನಗಳ ಸಭಾಧ್ಯಕ್ಷರು ಬಿಜೆಪಿ ಕೈಗೊಂಬೆಯಾಗಿದ್ದಾರೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ, ಸಂಸತ್ ಮೇಲಿನ ದಾಳಿಗೆ ನೈತಿಕ ಹೊಣೆ ಹೊತ್ತು ಕೂಡಲೇ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಸಿ.ಎಂ.ದ್ಯಾವಪ್ಪ, ರುದ್ರಪ್ಪ, ಅಮ್ಜದ್ ಪಾಷ, ದೊಡ್ಡಯ್ಯ, ಪ್ರಶಾಂತ್ ಬಾಬು, ಸುಂಡಹಳ್ಳಿ ಮಂಜುನಾಥ್, ಶ್ರೀಧರ್, ಎಂ.ಸಿ.ಶಿವಪ್ರಕಾಶ್, ಕೋಡಿಹಳ್ಳಿ ಚನ್ನೇಗೌಡ, ಹಾಲಹಳ್ಳಿ ಸಂಪತ್, ಎಂ.ಸಿ.ದೀಪಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net