ಹೊಂಡಗುಂಡಿ ರಸ್ತೆಯಲ್ಲಿ ಬೈಕ್ ರ‍್ಯಾಲಿ!, ಕಾರ್ಕಳ ಪುರಸಭೆ ಆಡಳಿತ ಅಣಕಿಸಿ ಕಾಂಗ್ರೆಸ್ ಪ್ರತಿಭಟನೆ

bike
Published on

ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ರಸ್ತೆ ಗುಂಡಿಗಳ ದುಸ್ಥಿತಿ ವಿರುದ್ಧ ಬ್ಲಾಕ್ ಕಾಂಗ್ರೆಸ್, ನಗರ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಭಾನುವಾರ ಮೂರು ಮಾರ್ಗ ಬಳಿ ಹೊಂಡದ ರಸ್ತೆಯಲ್ಲಿ ಬೈಕ್ ರ‍್ಯಾಲಿ ನಡೆಸಿ ಪ್ರತಿಭಟನೆ ನಡೆಸಲಾಯಿತು. ಹೊಂಡಗುಂಡಿ ರಸ್ತೆಯಲ್ಲಿ ಬೈಕ್ ರ‍್ಯಾಲಿ ಸ್ಪರ್ಧೆ ನಡೆಸಿ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಪಡೆದವರಿಗೆ ಟ್ರೋಫಿ, ನೋವಿಗೆ ಸವರುವ ಮೂವ್ ಮುಲಾಮ್ ವಿತರಿಸಿ ಆಡಳಿತ ವೈಪಲ್ಯವನ್ನು ಅಣಕಿಸಲಾಯಿತು.

ಕಾಂಗ್ರೆಸ್ ವಕ್ತಾರ ಶುಭದ ರಾವ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಪ್ರಮುಖರಾದ ಯೊಗೀಶ್ ಇನ್ನಾ, ಪ್ರಭಾಕರ ಬಂಗೇರ, ಕೃಷ್ಣ ಶೆಟ್ಟಿ ಬಜಗೋಳಿ, ಸುಶಾಂತ್ ಸುಧಾಕರ್, ಆರಿಪ್ ಕಲ್ಲೊಟ್ಟೆ, ನಾಸೀರ್, ಪುರಸಭೆ ಸದಸ್ಯರಾದ ಹರೀಶ್‌ಕುಮಾರ್, ಪ್ರತಿಮಾ ರಾಣೆ, ಸೋಮನಾಥ ಸಹಿತ ಬ್ಲಾಕ್, ಕಾಂಗ್ರೆಸ್, ನಗರ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆಯ ಪ್ರತಿಪಕ್ಷ ನಾಯಕ ಅಶ್ಫಕ್ ಅಹಮ್ಮದ್, ನಗರದ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಒದಗಿಸುವಲ್ಲಿ ಪುರಸಭಾ ಆಡಳಿತ ವರ್ಗ ವಿಫಲಗೊಂಡಿದೆ ಎಂದರು. ಮಳೆಗಾಲ ಕೊನೆಗೊಂಡಿದ್ದರೂ ನಗರದ ರಸ್ತೆಗಳ ದುರಸ್ತಿಗೆ ಇನ್ನೂ ಪುರಸಭೆ ಮುಂದಾಗಿಲ್ಲ. ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ರಸ್ತೆಯ ಸ್ಥಿತಿ ಈ ಹಂತಕ್ಕೆ ತಲುಪಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದ ಪುರಸಭೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಗರ ರಸ್ತೆ ಸುಗಮ ಸಂಚಾರಕ್ಕಿಂತ ರ‍್ಯಾಲಿನಡೆಸಲು ಯೋಗ್ಯವಾಗಿದೆ. ಅಭಿವೃದ್ಧಿ ಮಂತ್ರ ಹೇಳಿ ಶಾಸಕ, ಸಚಿವರಾಗಿ ಅಧಿಕಾರ ಹಿಡಿದು ಕೋಟಿ ಅಭಿವೃದ್ಧಿಯ ಜಪ ನಡೆಸುತ್ತಿರುವ ಸಚಿವ ವಿ. ಸುನೀಲ್‌ಕುಮಾರ್ ಹಾನಗಲ್ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಸ್ವ- ಕ್ಷೇತ್ರದ ರಸ್ತೆಯೆ ಸ್ಥಿತಿ ಅವರಿಗೆ ಕಂಡಿಲ್ಲ. ತಮ್ಮ ಕ್ಷೇತ್ರದಲ್ಲಿ ದುಪ್ಪಟ್ಟು ಸಮಸ್ಯೆಗಳನ್ನು ಇಟ್ಟುಕೊಂಡು ಇನ್ನೊಂದು ಕ್ಷೇತ್ರದಲ್ಲಿ ಹೋಗಿ ಅಭಿವೃದ್ಧಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆಯಿದೆಯೇ? ಇನ್ನಾದರೂ ಸಚಿವರು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಸಂಬಂಧಪಟ್ಟವರಿಗೆ ಸೂಚಿಸಿ, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು.

ಶುಭದ ರಾವ್, ಕಾಂಗ್ರೆಸ್ ವಕ್ತಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net