

ಶಿವಮೊಗ್ಗ: ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರು ನಡೆಸುತ್ತಿದ್ದ ಹೋರಾಟ ಬೆಂಬಲಿಸಿ ಬುಧವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ವಿನೋಬ ನಗರ ಪೊಲೀಸ್ ಚೌಕಿಯಲ್ಲಿ ಪ್ರತಿಭಟಿಸಿದರು. ಬಳಿಕ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 50ಕ್ಕೂ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕೆಲ ಸಮಯದ ಬಳಿಕ ಬಿಡುಗಡೆ ಮಾಡಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಿದ್ದ ಒಟ್ಟು 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಪರಿಹಾರ ನೀಡದೇ ವಂಚಿಸಿದೆ. ದೇಶದ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ ಎರಡನೇ ರಾಜ್ಯ ನಮ್ಮದು. ಆದರೂ ಮಲತಾಯಿ ನೀತಿ ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಿಂದ ಗೆದ್ದಿರುವ ಬಿಜೆಪಿ ಸಂಸದರು ಕೂಡಾ ಕೇಂದ್ರ ಸರ್ಕಾರಕ್ಕೆ ವಾಸ್ತವ ಸಂಗತಿ ಮನವರಿಕೆ ಮಾಡಿಕೊಡುತ್ತಿಲ್ಲ. ಜಿಎಸ್‌ಟಿ ಪರಿಹಾರ, ಬರ ಪರಿಹಾರ ಕೇಳುತ್ತಿಲ್ಲ. ಇದರಿಂದ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ರಾಜ್ಯಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್, ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ಪ್ರಮುಖರಾದ ಬಿ.ಲೋಕೇಶ್, ರಾಹುಲ್, ಎಸ್.ಕುಮಾರೇಶ್, ಸಂದೀಪ್, ಎಚ್.ಪಾಲಾಕ್ಷಿ, ಎಂ. ರಾಕೇಶ್, ಸುಹಾಸ್ ಗೌಡ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.