

ಕೋಲಾರ : ತೈಲ ಹಾಗೂ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡಿ ಕರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜನ ಸಾಮಾನ್ಯರಿಗೆ ಹೊರೆ ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್ ಒಬಿಸಿ ಘಟಕದ ಕಾರ್ಯಕರ್ತರು ತಾಲೂಕಿನ ವಕ್ಕಲೇರಿ ಗ್ರಾಮದ ಪೆಟ್ರೋಲ್ ಬಂದ್ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಕೆಪಿಸಿಸಿಯ ಒಬಿಸಿ ಘಟಕದ ಉಪಾಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರು, ಸಾಮಾನ್ಯ ವರ್ಗದವರ ಜೀವನ ಕಷ್ಟಕರವಾಗಿದೆ, ಸರ್ಕಾರದ ಏಕಪಕ್ಷೀಯ ನಿರ್ಧಾರಗಳಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 70 ರೂ. ಡೀಸೆಲ್ 58 ರೂ. ಇತ್ತು, ಪ್ರಧಾನಿ ಮೋದಿಗೆ ಜನರ ಹಿತ ರಕ್ಷಣೆಗಿಂತ ಬಂಡವಾಳಶಾಹಿಗಳು, ನೀರವ್ ಮೋದಿ, ಅದಾನಿ, ಅಂಬಾನಿ ಅವರ ಹಿತರಕ್ಷಣೆಯೇ ಮುಖ್ಯವಾಗಿದೆ ಎಂದರು.
ಜಿಲ್ಲಾ ಒಬಿಸಿ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಲಾಕ್‌ಡೌನ್ ನಡುವೆಯೇ ತೈಲ ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ತೈಲ ಬೆಲೆ ಹೆಚ್ಚಳದ ಪರಿಣಾಮ ದಿನ ಬಳಕೆಯ ಆಹಾರ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದ್ದು ಬಡವರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದರು.
ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ದಿನಗಳನ್ನು ಕಾಣಬಹುದೆಂಬ ನಂಬಿಕೆಯಿಂದ ಜನರು ಮೋದಿಗೆ ಅಧಿಕಾರ ನೀಡಿದರು. ಆದರೆ ಬೆಲೆ ಏರಿಕೆ ಹಾಗೂ ರೈತ ವಿರೋಧಿ ಧೋರಣೆಯಿಂದ ಮತದಾರರು ಮೋದಿ ಬಗ್ಗೆ ಬೇಸತ್ತಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಸಿ.ಆರ್.ಯುವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟಪತಿ, ಕೆ.ಆರ್.ತ್ಯಾಗರಾಜ್, ಮುಖಂಡರಾದ ನವೀನ್, ರಾಜೇಶ್ ನದೀಮ್ ಬೇಗ್, ತಮ್ಮಣ್ಣ, ಪ್ರಭಾಕರ್, ಇಕ್ಬಾಲ್, ಹರೀಶ್, ಅಂಜಿನಪ್ಪ ಇತರರಿದ್ದರು.