ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಕ್ಕೆ ಆಕ್ರೋಶ

IMG_20240817_174322_948.jpg
Published on

ಹುಬ್ಬಳ್ಳಿ: ರಾಜ್ಯಪಾಲ ಥಾವರಚಂದ ಗೆಹ್ಲೋತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಹಿಂದ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಸಿಎಂ ವಿರುದ್ಧ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಷ್ಯಡ್ಯಂತ್ರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಲ್. ಹನುಮಂತಯ್ಯ, ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಳೆದ 40 ವರ್ಷದಿಂದ ರಾಜಕೀಯ ಮಾಡಿರುವ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯವರು ರಾಜ್ಯಪಾಲರ ಮೂಲಕ ಪಿತೂರಿ ಮಾಡುತ್ತಿದ್ದಾರೆ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಈ ದಿನ ಕರಾಳ ದಿನವಾಗಿದೆ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡುವುದಿಲ್ಲ ಎಂದು ಗುಡುಗಿದರು.

ರಾಜ್ಯದಲ್ಲಿ ಯಾವುದೇ ಜಾತಿ, ಧರ್ಮ ನೋಡದೆ ಬಡವರಿಗಾಗಿ ಪಂಚ ಗ್ಯಾರಂಟಿಗಳನ್ನು ನೀಡಿ ಜನಪ್ರಿಯತೆ ಗಳಿಸಿದ್ದಾರೆ. ರಾಜಕೀಯವಾಗಿ ಮಣಿಸಲು ಸಾಧ್ಯವಾಗದೇ ಅವರ ವಿರುದ್ಧ ವಾಮಮಾರ್ಗದ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದು ಬಿಜೆಪಿಗೇ ತಿರುಗು ಬಾಣವಾಗಲಿದೆ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಸರ್ಕಾರವನ್ನು ಅಭದ್ರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಹಲವು ರಾಜ್ಯಗಳ ಸರ್ಕಾರಗಳನ್ನು ಬಿಜೆಪಿ ಅಸ್ಥಿರಗೊಳಿಸಿದೆ. ಬಿಜೆಪಿಯವರು ಹಿಂದಿನಿಂದಲೂ ಶಾಸಕರ ಖರೀದಿ ಮಾಡುವ ಮೂಲಕ ಕುದರೆ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಇದೀಗ ಯಾರೋ ಒಬ್ಬರ ಮಾತು ಕೇಳಿಕೊಂಡು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸರಿಯಲ್ಲ. 136 ಶಾಸಕರು ಒಗ್ಗಟ್ಟಾಗಿದ್ದೇವೆ. ಯಾವುದೇ ಕಾರಣಕ್ಕೂ ಸಿಎಂ ರಾಜಿನಾಮೆ ನೀಡಲು ಬಿಡುವುದಿಲ್ಲ ಎಂದು ಹೇಳಿದರು.

ಶಾಸಕ ಎನ್.ಎಚ್. ಕೋನರೆಡ್ಡಿ, ಅಪ್ಪಾಜಿ ನಾಡಗೌಡ ಮಾತನಾಡಿದರು.

ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಪ್ ಹಳ್ಳೂರ, ಅನಿಲಕುಮಾರ ಪಾಟೀಲ, ಮುಖಂಡರಾದ ಗಿರೀಶ ಗದಿಗೆಪ್ಪಗೌಡರ, ಎಂ.ಎಸ್. ಅಕ್ಕಿ, ಪಾರಸಮಲ್ ಜೈನ್, ನಿರಂಜನಯ್ಯ ಹಿರೇಮಠ, ದೀಪಾ ಗೌರಿ, ನಾಗರಾಜ ಗೌರಿ, ಸುವರ್ಣ ಕಲ್ಲಕುಂಟ್ಲ, ಆರಿಫ್ ಭದ್ರಾಪುರ, ಸದಾನಂದ ಡಂಗನವರ, ಶರಣಪ್ಪ ಕೊಟಗಿ, ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net