

ಚಿಕ್ಕಮಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬುಧವಾರ ಕಾರಿಗೆ ಹಗ್ಗ ಕಟ್ಟಿ ಎಳೆದು ವಿನೂತನ ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿಯಿಂದ ಸಿಲಿಂಡರ್ ಪ್ರದರ್ಶನದೊಂದಿಗೆ ಕಾರಿಗೆ ಹಗ್ಗಕಟ್ಟಿ ಎಳೆಯುತ್ತ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಿ ಆಜಾದ್ ಪಾರ್ಕ್ ವೃತ್ತದಲ್ಲಿ ಸೌದೆ ಒಲೆಯಲ್ಲಿ ಟೀ ತಯಾರಿಸಿದ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರಿಗೆ ಬದುಕು ಹೊರೆ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಏರಿಸಿ ಜನ ಸಾಮಾನ್ಯರ ಬದುಕು ಹೊರೆಯಾಗಿಸಿದೆ. ಅಕಾಲಿಕ ಮಳೆಯಾಗಿ ಕಾಫಿ ಬೆಳೆಗಾರರು ಹಾಗೂ ರೈತರು ಬದುಕು ಸಂಕಷ್ಟದಲ್ಲಿದ್ದು ಬಜೆಟ್‍ನಲ್ಲಿ ಯಾವುದೇ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಬ್ಲಾಕ್ ಅಧ್ಯಕ್ಷ ಹಂಪಾಪುರ ಮಂಜೇಗೌಡ ಮಾತನಾಡಿ, ಸರ್ಕಾರ ಕೃಷಿ ಉಪಕರಣಗಳ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಕೆಪಿಸಿಸಿ ಸದಸ್ಯ ಕೆ.ಮಂಜುನಾಥ್, ರಾಮಣ್ಣ, ಜಿಲ್ಲಾ ವಕ್ತಾರರಾದ ಎಚ್.ಎಸ್.ಪುಟ್ಟಸ್ವಾಮಿ, ರೂಬೆನ್ ಮೊಸಸ್, ಕಿಸಾನ್ ಸೆಲ್ ಅಧ್ಯಕ್ಷ ಪ್ರಕಾಶ್, ಸೇವಾದಳ ವಿಭಾಗದ ಜಿಲ್ಲಾಧ್ಯಕ್ಷ ಸಿಲ್ವರ್‍ಸ್ಟರ್, ಹೂವಪ್ಪ, ಹಿರೇಮಗಳೂರು ರಾಮಚಂದ್ರ, ಮಹಿಳಾ ಕಾಂಗ್ರೆಸ್‍ನ ಸುರೇಖಾ ಸಂಪತ್, ಗುಣವತಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ಸಂದೇಶ್ ಇದ್ದರು.