ಕಾಯ್ದೆ ತಿದ್ದುಪಡಿ ವಿರೋಧಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Cong. Strike
Published on

ಚಿಕ್ಕಮಗಳೂರು: ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮತ್ತು ದೆಹಲಿ ಹೋರಾಟ ಹತ್ತಿಕ್ಕಿ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಖಂಡಿಸಿ ಎಪಿಎಂಸಿ ಮುಂಭಾಗ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಖಾಸಗಿಕರಣದತ್ತ ಒಲವು-ವಿಪರ್ಯಾಸ

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ರಾಷ್ಟ್ರವಾದ ಹಾಗೂ ರಾಷ್ಟ್ರೀಯತೆ ಹೆಸರಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸತತವಾಗಿ ಖಾಸಗಿಕರಣದತ್ತ ಒಲವು ತೋರುತ್ತಿರುವುದು ವಿಪರ್ಯಾಸ. 70 ವರ್ಷದಲ್ಲಿ ಕಾಣಿಸದಷ್ಟು ಚಳಿ ಇಂದು ದೆಹಲಿಯಲ್ಲಿದೆ. ಇದರ ನಡುವೆ ದೇಶದ ಅನ್ನದಾತರು ಪ್ರತಿಭಟನೆ ಮಾಡುವ ಸಂದರ್ಭ ಕನಿಷ್ಠ ಸೌಜನ್ಯಕ್ಕಾದರೂ ಪ್ರಧಾನಿ ಅವರ ಬಳಿ ತೆರಳಿ ಸಮಸ್ಯೆಗೆ ಸ್ಪಂದಿಸದೆ ರೈತರ ಮೇಲೆ ಜಲಪಿರಂಗಿ ಹಾರಿಸಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದು ರೈತರಿಗೆ ಮಾಡಿದ ದ್ರೋಹ. ಮೋದಿಯವರು ಮನ್‍ಕೀ ಬಾತ್ ಬದಿಗೊತ್ತಿ ರೈತರ ಮನ್‍ಕೀ ಬಾತ್ ಕೇಳಿ ಅವರನ್ನು ಅರ್ಥೈಸಿಕೊಂಡರೆ ಸಾಕು. ರೈತ ವಿರೋಧಿ ಕಾನೂನನ್ನು ಸುಗೀವಾಜ್ಞೆ ಮೂಲಕ ಜಾರಿಗೆ ತರುವ ಮುನ್ನ ಅನ್ನದಾತರು ಸರ್ಕಾರದ ಮುಂದೆ ಇದನ್ನು ಬೇಡಿಕೆ ಇಟ್ಟಿದ್ದರೆ? ರೈತ ಸಂಘಟನೆಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೀರಾ ಎಂದು ಪ್ರಶ್ನಿಸಿದರು.

ರೈತರ ಬೆನ್ನು ಮೂಳೆ ಮುರಿವ ಕೆಲಸ

ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತ ವಿರೋಧಿ ಕಾಯ್ದೆ ಜಾರಿ ಮಾಡುವ ಮೂಲಕ ಅನ್ನದಾತನ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸ. ದೇಶದ ರೈತರು, ಕಾಯ್ದೆಯನ್ನು ವಿರೋಧಿಸಿದರೂ ಸುಗ್ರೀವಾಜ್ಞೆ ಮೂಲಕ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಕರಣಗೊಳಿಸಿ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿದ್ದೇವೆ ಎಂಬುದನ್ನು ಪ್ರಧಾನಿ ಮೋದಿ ಸಾಬೀತುಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ಆಹಾರ ಧಾನ್ಯವನ್ನು ಖರೀದಿಸುವಾಗ ಬೆಂಬಲ ಬೆಲೆ ಇಲ್ಲದಿರುವುದರಿಂದ ವ್ಯಾಪಾರಸ್ಥರು, ಕಾರ್ಪೋರೇಟ್ ಸಂಸ್ಥೆಗಳು ತಮಗಿಷ್ಟ ಬಂದಂತೆ ಕಡಿಮೆ ದರಕ್ಕೆ ಕೊಂಡುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಪಕ್ಷದ ಅಸಂಘಟಿತ ವಿಭಾಗದ ಜಿಲ್ಲಾ ಅಧ್ಯಕ್ಷ ರಸೂಲ್‍ಖಾನ್, ರೂಬೆನ್ ಮೋಸಸ್, ಹಿರೇಮಗಳೂರು ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ್, ಐಟಿ ವಿಭಾಗದ ಜಿಲ್ಲಾಧ್ಯಕ್ಷ ಕಾರ್ತಿಕ್ ಚೆಟ್ಟಿಯಾರ್, ಪ್ರಸಾದ್ ಅಮೀನ್, ರೈತ ವಿಭಾಗದ ಅಧ್ಯಕ್ಷೆ ಸರೋಜಮ್ಮ, ಗುಣವತಿ, ತಾರಾ, ಶಾಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net