ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ,  ಕಾಂಗ್ರೆಸ್ ನಾಯಕರ ಒಕ್ಕೋರಲ ಕೂಗು,  ಸಿಎಂ, ಡಿಸಿಎಂ ನಂತರ ಬಿಜೆಪಿಗೆ ಖರ್ಗೆ ಎಚ್ಚರಿಕೆ

IMG-20250501-WA0016-2.jpg
Published on

ಹುಬ್ಬಳ್ಳಿ: ಬ್ರಿಟಿಷರಿಗೆ ದೇಶ ಮಾರಲು ಹೊರಟಿದ್ದ ಆರ್ ಎಸ್ ಎಸ್, ಬಿಜೆಪಿಗರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ, ಬ್ರಿಟಿಷರ ಕೈಕೆಳಗೆ ಕೆಲಸ ಮಾಡಿದವರು ನಮಗೆ ದೇಶ ಭಕ್ತಿಯ ಪಾಠ ಮಾಡುತ್ತಿದ್ದಾರೆ. ಇವರಲ್ಲಿ ಯಾರಾದರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆಯೇ, ಜೈಲಿಗೆ ಹೋಗಿದ್ದಾರೆಯೇ? ಒಂದು ವೇಳೆ ನಾವು ತಿರುಗಿ ಬಿದ್ದರೆ ನಿಮ್ಮ ಅಡ್ರೆಸ್ಸೇ ಸಿಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.

ಇಲ್ಲಿಯ ಗಿರಣಿ ಚಾಳ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆ ಹಾಗೂ ಸಂವಿಧಾನ ರಕ್ಷಿಸಿ ದೇಶ ಉಳಿಸಿ ರ್ಯಾಲಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ನಿಮ್ಮಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಿಲ್ಲ. ಸುಮ್ಮನೆ ನಮ್ಮನ್ನು ಕೆಣಕಬೇಡಿ ಎಂದು ಹೇಳುವ ಮೂಲಕ ಈ ಹಿಂದಿನ ಪ್ರತಿಭಟನಾ ಸಭೆಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಅವರು ಬಿಜೆಪಿಯವರಿಗೆ ರಾಜ್ಯದಲ್ಲಿ ಯಾವುದೇ ಸಭೆ ಮಾಡಲು ಬಿಡುವುದಿಲ್ಲ ಎಂದು ನೀಡಿದ್ದ ಎಚ್ಚರಿಕೆ ಬೆನ್ನಲ್ಲೇ ಖರ್ಗೆಯವರು ಎಚ್ಚರಿಕೆ ನೀಡಿರುವುದು ಗಮನಾರ್ಹ.

ಎರಡು ವರ್ಷದ ಹಿಂದೆಯೇ ಜಾತಿ ಜನಗಣತಿ ಮಾಡಬೇಕೆಂದು ರಾಹುಲ್ ಗಾಂಧಿ ಅವರೊಂದಿಗೆ ಚಚಿರ್ಸಿ ಕೇಂದ್ರಕ್ಕೆ ಪತ್ರ ಬರೆದಿದ್ದೆ. ಆಗ ಕೇಂದ್ರದ ಕೆಲ ಸಚಿವರು ರಾಹುಲ್ ಗಾಂಧಿಯವರು ಜಾತಿ ಹೆಸರಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಆದರೆ, ಇದೀಗ ದೇಶಾದ್ಯಂತ ಹಿಂದುಳಿದ ವರ್ಗದವರ ಒತ್ತಾಯ ಹೆಚ್ಚುತ್ತಿದ್ದಂತೆ ಗಣತಿಗೆ ಒಪ್ಪಿಗೆ ನೀಡಿದೆ. ಇದು ಕಾಂಗ್ರೆಸ್ ಗೆ ಸಿಕ್ಕ ಜಯ ಎಂದರು.

ಪಹಲ್ಗಾಮ್ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆಯಬೇಕು ಎಂಬುದಕ್ಕೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಘಟನೆ ನಡೆದ ನಂತರ ಕರೆದ ಸರ್ವಪಕ್ಷ ಸಭೆಯಲ್ಲಿ ಸ್ವತಃ ಮೋದಿ ಅವರೇ ಗಾಯಬ್ ಆಗಿ ಬಿಹಾರದಲ್ಲಿ ಚುನಾವಣೆ ಭಾಷಣ ಮಾಡುತ್ತಿದ್ದರು. ಇದನ್ನೆಲ್ಲ ಬಿಟ್ಟು ದೇಶದ ಜನರಿಗೆ ರಕ್ಷಣೆ ಕೊಡಬೇಕು. ಕಾಶ್ಮೀರದಲ್ಲಿ ಗುಪ್ತಚರ ವೈಫಲ್ಯವೋ, ಪೊಲೀಸ್ ಇಲಾಖೆ ವೈಫಲ್ಯವೋ ಎಂಬುದನ್ನು ತಿಳಿಸಬೇಕು ಎಂದರು.

ವೈಫಲ್ಯ ಮುಚ್ಚಿಕೊಳ್ಳುವ ಯತ್ನ:
ನರೇಂದ್ರ ಮೋದಿ ಸರ್ಕಾರ ನಿರಂತರ ಬೆಲೆ ಏರಿಕೆ ಜತೆಗೆ ಜಾತಿ-ಧರ್ಮಗಳ ನಡುವೆ ವೈಷಮ್ಯದ ಬೀಜ ಬಿತ್ತುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿ.ಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಆಡಳಿತದಲ್ಲಿ ಅಕ್ಕಿಯಿಂದ ಚಿನ್ನದವರೆಗಿನ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಯುಪಿಎ ಹಾಗೂ ಎನ್‌ಡಿಎ ಆಡಳಿತದಲ್ಲಿನ ಬೆಲೆಗಳನ್ನು ತಾಳೆ ಹಾಕಿದ ಸಿಎಂ, ಮೋದಿ ಅವರೇ ಇದೇನಾ ನಿಮ್ಮ "ಅಚ್ಛೇ ದಿನ್' ಎಂದು ಪ್ರಶ್ನಿಸಿದರು.

ಬೆಲೆ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ. ಆದರೆ, ಇಲ್ಲಿನ ಬಿಜೆಪಿ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕರ್ನಾಟಕಕ್ಕೆ ಹಣ ಕೊಟ್ಟಿಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಪ್ರತಿ ವರ್ಷ 5 ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತದೆ. ಆದರೆ, ಕೇಂದ್ರ ಸರ್ಕಾರ ಮರಳಿ ಕರ್ನಾಟಕಕ್ಕೆ ಕೇವಲ 60 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಇದ್ಯಾವ ನ್ಯಾಯ ಎಂದು ಕೇಳಿದರು.

ಪರಿಸರ ಇಲಾಖೆ ಕ್ಲಿಯರನ್ಸ್ ನೀಡಿದರೆ ಇಂದೇ ಮಹದಾಯಿ ಯೋಜನೆ ಜಾರಿಗೆ ತರುತ್ತೇವೆ ಎಂದು ಘೋಷಿಸುವ ಮೂಲಕ ಸಿದ್ದರಾಮಯ್ಯ ಅವರು, ಕೇಂದ್ರಕ್ಕೆ ಸವಾಲು ಹಾಕಿದರು.

ಡಿಸಿಎಂ ಶಿವಕುಮಾರ, ಸಚಿವರಾದ ಶಿವರಾಜ ತಂಗಡಗಿ, ಶಿವಾನಂದ ಪಾಟೀಲ, ಮುಖಂಡರಾದ ಸಲೀಂ ಅಹ್ಮದ, ಹರಿಪ್ರಸಾದ, ಇತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net