

ಮಡಿಕೇರಿ:
ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನ ಉಭಯ ಸದನಗಳ ೧೪೨ ಸದಸ್ಯರನ್ನು ಅಸಂವಿಧಾನಿಕ ರೀತಿಯಲ್ಲಿ ಅಮಾನತ್ತುಗೊಳಿಸಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿ ಎಐಸಿಸಿ ಹಾಗೂ ಕೆಪಿಸಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿಯಲ್ಲೂ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಚೌಕಿಯ ಇಂದಿರಾ ಗಾಂಧಿ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ವೇಳೆ ನರೇಂದ್ರ ಮೋದಿ, ಬಿಜೆಪಿ ಹಾಗೂ ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರದ ಬಿಜೆಪಿ ಸರ್ಕಾರದಿಂದಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನರೇಂದ್ರ ಮೋದಿ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲೆಲ್ಲಾ ದೇಶದ ಭದ್ರತೆಗೆ ಧಕ್ಕೆ ಆಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ವಿಮಾನ ಹೈಜಾಕ್, ೨೦೧೨ರಲ್ಲಿ ಸಂಸತ್ ಮೇಲೆ ದಾಳಿ ಸಂದರ್ಭದಲ್ಲೂ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಇದೀಗ ಸಂಸತ್ತಿಗೆ ಆಗುಂತಕರು ನುಗ್ಗುವ ವೇಳೆಯಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಈ ಘಟನೆ ದೇಶಕ್ಕೆ ಅಪಮಾನಕರವಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ದೇಶದ ಮಾನ ಹರಾಜಾಗಿದೆ. ಇಂಥ ಸಂದರ್ಭದಲ್ಲಿ ದೇಶದ ಭದ್ರತೆಗೆ ಧಕ್ಕೆ ಆಗಿರುವುದರ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಯು ಸಂದರ್ಭದಲ್ಲಿ ಸಂಸದರನ್ನು ಅಮಾನತ್ತು ಮಾಡಲಾಗಿದೆ.
ಸಂಸತ್ತಿನ ಒಳಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಬೇಕು. ನಡೆದಿರುವ ತಪ್ಪಿನ ಬಗ್ಗೆ ನಿಷ್ಪಕ್ಷವಾಗಿ ತನಿಖೆ ಆಗಬೇಕು. ಸಂಸದ ಪ್ರತಾಪ್ ಸಿಂಹ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಇರುವಾಗ ಭದ್ರತೆಗೆ ಯಾಕೆ ಒತ್ತು ಕೊಡುವುದಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇವುಗಳನ್ನೆಲ್ಲಾ ಚರ್ಚೆ ಮಾಡಬೇಕಿರುವಾಗ ಸಂಸದರನ್ನು ಅಮಾನತ್ತು ಮಾಡುವ ಮೂಲಕ ಬಿಜೆಪಿ ಹೇಡಿತನ ಪ್ರದರ್ಶಿಸಿದೆ. ಈ ಅಮಾನತ್ತು ವಾಪಸ್ ಪಡೆದುಕೊಂಡು ಚರ್ಚೆ ನಡೆಯುವುದಕ್ಕೆ ಆಸ್ಪದ ಕೊಡಬೇಕು. ಯಾವುದೇ ರೀತಿಯ ನಿರಂಕುಶ ಆಡಳಿತ ಮಾಡಬಾರದು ಎಂದು ಒತ್ತಾಯಿಸಿದರು.
ಪಕ್ಷದ ಪ್ರಮುಖರಾದ ಟಿ.ಪಿ. ರಮೇಶ್, ವೀಣಾ ಅಚ್ಚಯ್ಯ, ಕೆ.ಕೆ. ಮಂಜುನಥ ಕುಮಾರ್, ಸುರಯ್ಯ ಅಬ್ರಾರ್, ಮುನೀರ್ ಅಹಮ್ಮದ್, ಚುಮ್ಮಿ ದೇವಯ್ಯ, ಕೊಲ್ಯದ ಗಿರೀಶ್, ಸೂರಜ್ ಹೊಸೂರು, ತೆನ್ನೀರ ಮೈನಾ, ಚಂದ್ರಶೇಖರ್, ನೆರವಂಡ ಉಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.