

ಮಂಡ್ಯ: ಮೈಷುಗರ್ ಕಾರ್ಖಾನೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಪಪ್ರಚಾರ ನಡೆಸುತ್ತಿದ್ದಾರೆಂದು ಟೀಕಿಸಿ ನಗರದಲ್ಲಿ ಕಿಸಾನ್ ಕಾಂಗ್ರೆಸ್‌ನಿಂದ ಸಕ್ಕರೆ ತಿಂದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪಕ್ಷದ ಕಾರ್ಯಕರ್ತರು, ರಾಜ್ಯ ಸರ್ಕಾರ ಸಕಾಲದಲ್ಲಿ ಅನುದಾನ ಒದಗಿಸಿ ಮೈಷುಗರ್ ಕಾರ್ಖಾನೆ ಉಳಿಸಿ ರೈತರ ಹಿತ ಕಾಪಾಡುವ ಮೂಲಕ ಜಿಲ್ಲೆಗೆ ಸಿಹಿ ನೀಡಿದೆ. ಕಾರ್ಖಾನೆ ಸುಸ್ಥಿತಿಯಲ್ಲಿ ಮುನ್ನಡೆಯುತ್ತಿದ್ದರೂ ಬಿಜೆಪಿ ಕಾರ್ಯಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿರಂತರವಾಗಿ ಸಾಗಿದ್ದು, ಸಕಾಲದಲ್ಲಿ ಒಪ್ಪಿಗೆ ಕಬ್ಬನ್ನು ಕಟಾವು ಮಾಡಲಾಗುತ್ತಿದೆ. ಆದರೆ ಖಾಸಗಿ ಕಂಪನಿಗಳ ಜತೆ ಶಾಮೀಲಾಗಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು, ವಿದ್ಯುತ್ ತೊಂದರೆಯಿಂದ ಎರಡು ದಿನ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದ್ದನ್ನು ನೆಪ ಮಾಡಿಕೊಂಡು ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಬೇವಿನ ಸೊಪ್ಪು ತಿಂದು ರೈತರಿಗೆ ಕಹಿ ನೀಡಲಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಖಾನೆಯನ್ನು ಮುಚ್ಚಲು ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲದೆ ಖಾಸಗೀಕರಣ ಮಾಡುವ ಹುನ್ನಾರ ಮಾಡಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಕೋಟಿ ರೂ ಅನುದಾನ ನೀಡಿ ಕಾರ್ಖಾನೆ ಆರಂಭಕ್ಕೆ ನಾಂದಿ ಹಾಡಿದರು. ನಿರಂತರವಾಗಿ ಕಾರ್ಖಾನೆಗೆ ಅನುದಾನ ನೀಡುತ್ತಾ ಬಂದಿದ್ದಾರೆ. ಕಾರ್ಖಾನೆ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ. ಇದನ್ನು ಸಹಿಸದ ಬಿಜೆಪಿ ಅಪಪ್ರಚಾರದಲ್ಲಿ ನಿರತವಾಗಿದೆ ಎಂದು ಕಿಡಿಕಾರಿದರು.
2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮೈಷುಗರ್ ಅಧ್ಯಕ್ಷರನ್ನಾಗಿ ತನ್ನ ಆಪ್ತನನ್ನು ಮಾಡಿದ್ದರು. ಅವರು ಕೋಟ್ಯಂತರ ರೂ ಅವ್ಯವಹಾರ ಮಾಡಿದ್ದರು. ಈ ಬಗ್ಗೆ ಲೋಕಾಯುಕ್ತ ತನಿಖೆ ಕೂಡ ಆಗಿದೆ. ಆ ಹಣವನ್ನು ಬಿಜೆಪಿ ನಾಯಕರು ಮೊದಲು ವಸೂಲಿ ಮಾಡಿಕೊಡಲಿ ಸವಾಲು ಹಾಕಿದರು. ಕಾರ್ಖಾನೆಯನ್ನು ಮುಚ್ಚಿ ಹಾಕುವ ಹುನ್ನಾರವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಹಾಗಾಗಿ ಸಣ್ಣಪುಟ್ಟ ವಿಷಯದಲ್ಲಿ ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ 500 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ನೀಡುವ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಿದೆ. ಇದನ್ನು ಸಹಿಸದೆ ಅಪಪ್ರಚಾರ ಮಾಡಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಮುಚ್ಚಿ ಹಾಕಲು ಹುನ್ನಾರ ಮಾಡಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಮುಖಂಡರಾದ ಬಿ.ಶಿವನಂಜು, ಸಿ.ಎಂ.ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಎಚ್.ಡಿ.ಜಯರಾಮ್, ಚಂದಗಾಲು ವಿಜಯಕುಮಾರ್, ಪ್ರಕಾಶ್, ಅಂಜನಾ ಶ್ರೀಕಾಂತ್, ವೀಣಾ, ಶಕುಂತಲಾ ಇತರರಿದ್ದರು.