

ಕೆ.ಆರ್.ಪೇಟೆ: ಸಚಿವ ಕೆ.ಸಿ.ನಾರಾಯಣಗೌಡ ಅಧಕ್ಷ, ಅಪ್ರಬುದ್ಧ ರಾಜಕಾರಣಿಯಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಇವರನ್ನು ತಿರಸ್ಕರಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಜನತೆಗೆ ಮನವಿ ಮಾಡಿದರು.
ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರ ಜಿಲ್ಲೆ. ಸಚಿವ ಕೆ.ಸಿ.ನಾರಾಯಣಗೌಡ ಸರಿಯಾಗಿ ಕನ್ನಡವನ್ನೇ ಮಾತನಾಡದೆ ರಾಜ್ಯದಲ್ಲಿ ಜಿಲ್ಲೆಯ ಜನರ ಗೌರವ ಕಳೆಯುತ್ತಿದ್ದಾರೆ. ಸಚಿವರಾಗಿದ್ದು ಕ್ಷೇತ್ರದ ಅಭಿವೃದ್ಧ್ದಿಗೆ ಬಿಡಿಗಾಸು ಅನುದಾನ ತರದೆ ಕೇವಲ ಭೂಮಿಪೂಜೆ ಮಾಡಿಕೊಂಡು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಾರಾಯಣಗೌಡ ಶಾಸಕರಾದ ನಂತರ ಕ್ಷೇತ್ರದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಹಳ್ಳ ಹಿಡಿದಿದ್ದು ಜನರ ಬಳಿ ಹೋಗಿ ಮತ ಕೇಳುವ ಹಕ್ಕನ್ನು ಸಚಿವರು ಕಳೆದುಕೊಂಡಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ನಿರಾಣಿ ಕಡೆಯವರಿಗೆ ಒಂದು ರೀತಿಯ ವೇತನ ಮತ್ತು ಸ್ಥಳೀಯರಿಗೆ ಒಂದು ರೀತಿಯ ವೇತನ ನೀಡುತ್ತಿದ್ದು ಇದನ್ನು ಸರಿಪಡಿಸುವ ಕನಿಷ್ಠ ಪ್ರಜ್ಞೆಯನ್ನು ಸಚಿವ ಕೆ.ಸಿ.ನಾರಾಯಣಗೌಡ ಪ್ರದರ್ಶಿಸಿಲ್ಲ. ಅಧ್ಯಕ್ಷ ಹಾಗೂ ಸುಳ್ಳುಗಾರ ಸಚಿವರನ್ನು ಕ್ಷೇತ್ರದ ಜನ ಮನೆಗೆ ಕಳುಹಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಸಚಿವರ ಕಾರ್ಯವೈಫಲ್ಯವನ್ನು ಜನರ ಮುಂದಿಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ಹೋಬಳಿಯಲ್ಲೂ ಪ್ರತಿಭಟನಾ ಸಭೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಸಚಿವ ಕೆ.ಸಿ.ನಾರಾಯಣಗೌಡ ಕ್ಷೇತ್ರದಲ್ಲಿ ನೀಚ ರಾಜಕಾರಣ ಮಡುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಹೊಸಹೊಳಲು ಚಿಕ್ಕಕೆರೆಯನ್ನು ನಾಶ ಮಾಡಲಾಗುತ್ತಿದೆ. ಪಟ್ಟಣದ ಸಾರ್ವಜನಿಕ ಕ್ರೀಡಾಂಗಣವನ್ನು ನಿರುಪಯುಕ್ತಗೊಳಿಸಲಾಗಿದೆ. ಕ್ಷೇತ್ರದ ಜನ ರೊಚ್ಚಿಗೇಳುವ ಮುನ್ನ ಸಚಿವ ಕೆ.ಸಿ.ನಾರಾಯಣಗೌಡ ರಾಜೀನಾಮೆ ಕೊಟ್ಟು ಹೋಗುವಂತೆ ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿ, ಅತಿವೃಷ್ಟಿಯಿಂದ ಹಾನಿಗೀಡಾದ ತಾಲೂಕಿನ ದೊಡ್ಡಕ್ಯಾತನಹಳ್ಳಿ, ಅಘಲಯ, ಮಾದಿಹಳ್ಳಿ ಮುಂತಾದ ಭಾಗದ ಕುಸಿದ ಸೇತುವೆಗಳ ಮರು ನಿರ್ಮಾಣ ಇದೂವರೆಗೂ ಆಗಿಲ್ಲ. ಈ ಭಾಗದ ಜನ ಸುತ್ತಿ ಬಳಸಿ ತಿರುಗಾಡುತ್ತಿದ್ದರೂ ಸಚಿವರಿಗೆ ಅದರ ಬಗ್ಗೆ ಕಾಳಜಿಯಿಲ್ಲ. ಮಾತೆತ್ತಿದರೆ ಸಚಿವರು 1,700 ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಈ ಅನುದಾನ ಎಲ್ಲಿಗೆ ಬಳಕೆಯಾಗಿದೆ ಎಂದು ಪ್ರಶ್ನಿಸಿದರು.
ಮುಖಂಡ ವಿಜಯ ರಾಮೇಗೌಡ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಮಿತಿಯ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್, ವೀಕ್ಷಕ ಚಿನಕುರುಳಿ ರಮೇಶ್, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಪ್ರತಿನಿಧಿ ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಎಲ್.ಕೆ.ದೇವರಾಜು, ಮುಖಂಡರಾದ ಬಸ್ತಿ ರಂಗಪ್ಪ, ರಾಜಯ್ಯ, ಶಿವಣ್ಣ, ಡಾ.ರಾಮಕೃಷ್ಣೇಗೌಡ, ಟಿ.ಎನ್.ದಿವಾಕರ್, ಚೇತನ ಮಹೇಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.