ಕೇಂದ್ರ ಸರ್ಕಾರವೇ ಬೆಲೆ ಏರಿಕೆಗೆ ಕಾರಣ

k.Shambhu Shetty
Published on

ಕಾರವಾರ: ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದು, ಜನಸಾಮಾನ್ಯರ ಜೀವನ ನಿರ್ವಹಣೆಗೆ ಸಂಕಷ್ಟ ಉಂಟಾಗುತ್ತಿದೆ. ಕೇಂದ್ರದ ನಡೆಯನ್ನು ಖಂಡಿಸಿ ಏ.17 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ನಿಯಮಾವಳಿಗಳಿಂದ ಗ್ರಾಹಕರನ್ನು ಲೂಟಿ ಮಾಡಲಾಗುತ್ತಿದೆ. ಬ್ಯಾಂಕ್ ಎಟಿಎಂಗಳಿಂದ 5 ಕ್ಕಿಂತ ಹೆಚ್ಚು ಬಾರಿ ಹಣ ವಿತ್‌ಡ್ರಾಗಳ ಮೇಲೆ ಮೇ 1 ರಿಂದ 23 ರೂ. ಶುಲ್ಕ ವಿಧಿಸಲಾಗುತ್ತಿದೆ. ಜನಸಾಮಾನ್ಯರು ಬ್ಯಾಂಕಿಂಗ್ ಬಳಸಲೇ ಬಾರದು ಕೇವಲ ಶ್ರೀಮಂತರು, ಉದ್ಯಮಿಗಳು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆ ಬಳಸಬೇಕು ಎಂಬ ಪರಿಸ್ಥಿತಿಯನ್ನು ಕೇಂದ್ರ ತಂದಿಟ್ಟಿದೆ ಎಂದು ದೂರಿದರು.

ಶ್ರೀಮಂತ ವ್ಯಾಪಾರಸ್ಥರು ಜೀವನಾವಶ್ಯಕ ವಸ್ತುಗಳ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಅವರ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಿ ಕ್ರಮ ವಹಿಸುತ್ತಿಲ್ಲ. ಕೇಂದ್ರ ಸರ್ಕಾರದ ನೀತಿಗಳಿಂದ ಜೀವನಾವಶ್ಯಕ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಜಿಲ್ಲೆಯ ಪ್ರಮುಖರೂ ಭಾಗವಹಿಸಲಿದ್ದೇವೆ ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ ಮಾತನಾಡಿ, ಮೊದಲು ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತು. ಎಲ್ಲರಿಗೆ ಸಿಲಿಂಡರ್ ನೀಡಲಾಯಿತು. ನಂತರ ಸಿಲಿಂಡರ್ ಬೆಲೆ ಸಾವಿರಕ್ಕೆ ಏರಿತು. ಸಬ್ಸಿಡಿ ಕಡಿಮೆ ಮಾಡಲಾಯಿತು. ಬಡ ಜನರಿಂದ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಪ್ರಮುಖರಾದ ಸಲೀಂ ಶೇಖ್, ಚಂದ್ರಕಾಂತ ನಾಯ್ಕ, ಪೂರ್ಣಾನಂದ ನಾಯ್ಕ, ಶಶಾಂಕ ಕಡವಾಡಕರ್, ಅಬ್ದುಲ್ ಅಜೀಜ್ ಶೇಖ್, ಗಣಪತಿ ಕುಡ್ತಲಕರ್, ರವಿಕಾಂತ ತಳೇಕರ್, ಶಂಕರ ಗುನಗಿ, ರೋಹಿದಾಸ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net