

ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ಜಿಲ್ಲೆಯಲ್ಲಿ ಅ. 1, 2 ಮತ್ತು 3 ನಡೆಯಲಿದ್ದು, ಅಂದಾಜು 30 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
ಯಾತ್ರೆ ಸೆ.30 ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಲಿದ್ದು, ಅ.1 ರಂದು ತಾಂಡವಪುರಕ್ಕೆ ಆಗಮಿಸಲಿದೆ. ಅ.2 ರಂದು ಬದನವಾಳು ಗ್ರಾಮದಲ್ಲಿ ಅಧಿವೇಶನ ನಡೆಯಲಿದೆ. ಅಂದು ಸಂಜೆ ತಾಂಡವಪುರದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.3ರಂದು ಮೈಸೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಸುಮಾರು 14 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಮೂರು ಸಾವಿರ ಕಾರ್ಯಕರ್ತರು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಈ ಜೋಡೋ ಯಾತ್ರೆ ಆರಂಭಿಸಿಲ್ಲ. ಬದಲಿಗೆ ಜನರಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಇರುವ ಅಪಾಯದ ಕುರಿತು ತಿಳಿಸಿಕೊಡಲು ಆಯೋಜಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಯಾವ ಭರವಸೆಯನ್ನೂ ಈವರೆಗೂ ಈಡೇರಿಸಿಲ್ಲ. ಹುಸಿ ಭರವಸೆ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯನ್ನು ಹಿನ್ನೆಲೆಗೆ ಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಮಾಜಿ ಸಚಿವೆ ಉಮಾಶ್ರೀ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಇತರರಿದ್ದರು.