ಸಂಸದ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸಿ: ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಒತ್ತಾಯ

Congress press conference against Prajwal Revanna mandya
Published on

ಮಂಡ್ಯ: ಪೆನ್‌ಡ್ರೈವ್ ಪ್ರಕರಣದ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಪೆನ್‌ಡ್ರೈವ್ ಹಂಚಿಕೆ ಮೂಲಕ ಅಶ್ಲೀಲ ವೀಡಿಯೋಗಳನ್ನು ವೈರಲ್ ಮಾಡಿದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಿ.ಎಸ್.ಅಂಜನಾ ಶ್ರೀಕಾಂತ್ ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣ ಅವರು ಯಾವುದೇ ದೇಶದಲ್ಲಿದ್ದರೂ ಅವರನ್ನು ಪತ್ತೆ ಮಾಡಿ ಬಂಧಿಸಬೇಕು. ಈ ಪ್ರಕರಣದಿಂದಾಗಿ ಹಾಸನದಲ್ಲಿ ಏನು ನಡೆಯುತ್ತಿದೆ. ಪ್ರಜಾಪ್ರಭುತ್ವ ಇದೆಯೇ, ಇಲ್ಲವೇ ಎಂಬುದೇ ಅನುಮಾನವಾಗಿದೆ. ಒಂದು ರೀತಿಯಲ್ಲಿ ಪಾಳೇಗಾರಿಕೆ ಸಂಸ್ಕೃತಿ ನಡೆಯುತ್ತಿದೆ ಎನ್ನಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದು ಐದು ವರ್ಷದ ಹಿಂದಿನ ವಿಡಿಯೋ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಹಾಗಿದ್ದರೆ ಪುತ್ರ ಪ್ರಜ್ವಲ್‌ನ ಈ ಅನೈತಿಕತೆ ವಿಚಾರ ರೇವಣ್ಣ ಅವರಿಗೆ ಮೊದಲೇ ತಿಳಿದಿತ್ತೆಂಬುದು ಸ್ಪಷ್ಟವಾಗಿದೆ. ಹಾಗಿದ್ದರೂ ಏಕೆ ಸುಮ್ಮನಿದ್ದರು?. ಮತ್ತೆ ಚುನಾವಣೆಗೆ ಏಕೆ ನಿಲ್ಲಿಸಿದರು?. ಇದೇನಾ ಮಹಿಳೆಯರಿಗೆ ಜೆಡಿಎಸ್ ಕೊಡುವ ಗೌರವ ಎಂದು ಪ್ರಶ್ನಿಸಿದ ಅವರು, ವಿಕೃತಕಾಮಿ ಮತ್ತು ಕೊಲೆಗಾರ ಉಮೇಶ್‌ರೆಡ್ಡಿಗೆ ನೀಡಿರುವಂತಹ ಶಿಕ್ಷೆಯನ್ನೇ ಸಂಸದ ಪ್ರಜ್ವಲ್ಗೂ ನೀಡಬೇಕು. ಹಾಗೆಯೇ ಪ್ರಜ್ವಲ್ ವಿರುದ್ಧ ಮನಃಸ್ಥಿತಿ ಮತ್ತು ಅವರ ಅನೈತಿಕೆಯನ್ನು ಬಯಲಿಗೆಳೆಯುವ ನೆಪದಲ್ಲಿ ಅಶ್ಲೀಲ ವೀಡಿಯೋ ವೈರಲ್ ಮಾಡಿ ಸಂತ್ರಸ್ತ ಹೆಣ್ಣು ಮಕ್ಕಳ ಮಾನಹರಣ ಮಾಡಲಾಗಿದೆ. ಇವರೂ ಕೂಡ ಪ್ರಜ್ವಲ್ ರೇವಣ್ಣ ಅವರಷ್ಟೇ ತಪ್ಪಿತಸ್ಥರು ಎಂದು ಪ್ರತಿಪಾದಿಸಿದರು.

ಸಂತ್ರಸ್ತರಲ್ಲಿ ಮನೆಕೆಲಸದವರು, ಮಹಿಳಾ ಅಧಿಕಾರಿಗಳಿದ್ದಾರೆ. ಅವರೆಲ್ಲರ ಮಾನಹಾನಿಯಾಗಿದೆ. ಸಮಾಜದಲ್ಲಿ ಅವರು ತಲೆ ಎತ್ತಿಕೊಂಡು ತಿರುಗಾಡುವುದಾದರೂ ಹೇಗೆ?. ಇದು ನಾಗರಿಕ ಸಮಾಜ ತಲೆತಗ್ಗಿಸುವ ಹಾಗೂ ನಾಚಿಕೆಗೇಡಿನ ಸಂಗತಿ. ಶತಮಾನಗಳಿಂದಲೂ ಹೆಣ್ಣು ಮಕ್ಕಳ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇದು ನಿಲ್ಲಬೇಕೆಂದು ಆಗ್ರಹಿಸಿದರು.

ನಗರಸಭೆ ಮಾಜಿ ಉಪಾಧ್ಯಕ್ಷೆ ಬಿ.ಆರ್.ಇಂದಿರಾ ಸತೀಶ್‌ಬಾಬು, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ನೀಲಾಮೂರ್ತಿ, ಬೇಲೂರು ಗ್ರಾ.ಪಂ ಅಧ್ಯಕ್ಷೆ ಸುವರ್ಣಾವತಿ, ಹೀನಾ ಕೌಸರ್, ಪದ್ಮಾಮೋಹನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net