

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ನೀಡಲಾಗಿರುವ ನಿವೇಶನಗಳಲ್ಲಿ ಯಾವುದೇ ನಿಯಮಗಳು ಉಲ್ಲಂಘನೆ ಆಗದಿದ್ದರೂ, ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬ ಸುಳ್ಳು ದೂರಿನ ಆಧಾರದ ಮೇಲೆ ರಾಜ್ಯಪಾಲರು ಸಿಎಂಗೆ ನೋಟೀಸ್ ನೀಡಿರುವುದು ಅಸಂವಿಧಾನಿಕ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಖಂಡಿಸಿದರು.
ಕೇಂದ್ರಸರ್ಕಾರ ರಾಜಭವನವನ್ನು ದುರುಪಯೋಗಪಡಿಕೊಳ್ಳುತ್ತಿದ್ದಾರೆ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ್ ಅವರಿಂದ ದಾನಪತ್ರದ ಮೂಲಕ 3.16 ಎಕರೆ ಜಮೀನು ಬಂದಿದೆ. ಸದರಿ ಜಮೀನು ಮೂಲತಃ ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಜವರ ಬಿನ್ ನಿಂಗ ಎಂಬುವರು ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಂಡಿರತಕ್ಕ ಜಮೀನಾಗಿರುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಮಾರುಕಟ್ಟೆ ಬೆಲೆಗೆ ಕೊಂಡಂತಹ ಜಮೀನನ್ನು ಮಾಡಿದರೆ ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಆಗುವುದಿಲ್ಲವೆಂದು ಉಚ್ಚ ನ್ಯಾಯಾಲಯ ತಿಳಿಸಿದೆ. ಆದರೆ ಬಿಜೆಪಿಯವರು ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿರುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರಸಭೆ ಸದಸ್ಯಶ್ರೆಧರ್, ಮುಖಂಡರಾದ ಶಿವನಂಜು, ವೆಂಕಟೇಶ್ ಇತರರು ಗೋಷ್ಠಿಯಲ್ಲಿದ್ದರು.