ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ಅಧಿಕಾರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ವಿಶ್ವಾಸ

4
Published on

ಮಂಡ್ಯ: ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ನಡೆಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಭರವಸೆ ನೀಡಿದರು.

ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತದಾರರು ಕೈ ಹಿಡಿದಿದ್ದಾರೆ. ಅವರ ಆಸೆಗೆ ತಣ್ಣೀರೆರಚದೆ ಜನಪರ ಆಡಳಿತ ನಡೆಸಲಿದ್ದೇವೆ. ಹಿಂದಿನ ಜನಪ್ರತಿನಿಧಿಗಳ ರೀತಿ ದ್ವೇಷ ಮಾಡದೆ ಯಾರನ್ನೂ ವೈಯಕ್ತಿಕವಾಗಿ ಹೀಯಾಳಿಸದೆ ಅಗೌರವ ತೋರದೆ ಎಲ್ಲರನ್ನೂ ಒಟ್ಟುಗೂಡಿಸಿ ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಸರ್ಕಾರದ ಟೀಕೆ ಟಿಪ್ಪಣಿಗಳಿಗೆ ಜಿಲ್ಲೆಯ ಜನ ಸೊಪ್ಪು ಹಾಕದೆ ಅಭಿವೃದ್ಧಿ ದೃಷ್ಠಿಯಿಂದ ನಮಗೆ ಮತ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲು-ನೀರು ಹಗರಣ ಹಾಗೂ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದಿರುವ 72 ಕೋಟಿ ರೂ ಹಗರಣವನ್ನೂ ಸೇರಿದಂತೆ ತನಿಖೆಗೆ ಒಳಪಡಿಸಲಾಗುವುದು. ಮೇಲುಕೋಟೆ ಕ್ಷೇತ್ರದ ಫಲಿತಾಂಶದ ನಂತರ ಚಿನಕುರಳಿ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಅಶಾಂತಿ ಉಂಟುಮಾಡಲು ಪ್ರಯತ್ನಿಸಿರುವುದು ಖಂಡನೀಯ. ಪ್ರಸ್ತುತ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ಮತಯಾಚನೆ ಮಾಡುವುದರ ಬದಲಾಗಿ, ವೈಯಕ್ತಿಕ ನಿಂದನೆ ಮತ್ತು ಸೇಡಿನ ರಾಜಕಾರಣ ಮಾಡಿರುವವರಿಗೆ ಮತದಾರರು ಮತದಾನದ ಮೂಲಕ ಉತ್ತರ ನೀಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಗುಡುಗಿದರು.

ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಮಹಿಳಾಧ್ಯಕ್ಷೆ ಅಂಜನಾ, ಮುಖಂಡರಾದ ಸಿ.ಆರ್. ರಮೇಶ್, ಮುಜಾಹಿದ್, ನಗರಸಭಾ ಸದಸ್ಯರಾದ ಶ್ರೆಧರ್, ನಹೀಂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net