

ಚನ್ನರಾಯಪಟ್ಟಣ: ನಾನು ಸಿಎಂ ಆಗಿದ್ದ ವೇಳೆ ಚನ್ನರಾಯಪಟ್ಟಣ ತಾಲೂಕಿಗೆ 5 ನೀರಾವರಿ ಯೋಜನೆಗಳನ್ನು ಕೊಟ್ಟೆ. ಇದೀಗ 5 ಗ್ಯಾರಂಟಿಗಳನ್ನು ನೀಡುವ ಮೂಲಕ ನಿಮ್ಮೆಲ್ಲರ ಕೈ ಬಲಪಡಿಸಲಾಗಿದೆ. ಆದ್ದರಿಂದ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ನಿಮಗೆ ಕೊಟ್ಟಿದಾದರೂ ಏನು?, ನೀರಾವರಿ ಯೋಜನೆ ಕೊಟ್ಟರಾ, ಅಭಿವೃದ್ಧಿ ಹರಿಕಾರ ರೇವಣ್ಣ ಎಂದು ಬಿಂಬಿಸಿಕೊಳ್ಳುವ ನಿಮ್ಮ ಕೊಡುಗೆ ಏನು?, ಆದರೆ ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರ ಹಿತಕ್ಕಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಎಂದರು.
ಜನರ ಕಷ್ಟಗಳಿಗೆ ಆಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ಗೆ ನೀವೆಲ್ಲರೂ ಅಶೀರ್ವಾದ ಮಾಡಬೇಕು. ಕೊಟ್ಟ ಮಾತುಗಳನ್ನು ಈಡೇರಿಸಿದ ನಮಗೆ ಮತ ಕೇಳಲು ಹಕ್ಕಿದೆ, ನೈತಿಕತೆ ಇದೆ. ನರೇಂದ್ರ ಮೋದಿ, ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಮತ ಕೇಳಲು ಹಕ್ಕು ಇದೆಯಾ, ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು. ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿಯಾಗುತ್ತೆ ಅಂದರು. ಸುಭದ್ರ ಆರ್ಥಿಕತೆಯಿಂದ ರಾಜ್ಯದ ಎಲ್ಲ ವರ್ಗಗಳಿಗೂ ಗ್ಯಾರಂಟಿ ನೀಡುತ್ತಿದ್ದೇವೆ. ಬಿಜೆಪಿ, ಜೆಡಿಎಸ್‌ನವರಿಗೂ ಗ್ಯಾರಂಟಿ ನೀಡುತ್ತಿದ್ದೇವೆ. ಇದೀಗ ನಮ್ಮ ಗ್ಯಾರಂಟಿಯನ್ನೇ ಕದ್ದು ಮೋದಿ ಗ್ಯಾರಂಟಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಿಡಿಎ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ಮೋದಿ ಕಳೆದ 10 ವರ್ಷಗಳಿಂದ ಅಚ್ಛೆ ದಿನ್ ಆಯೇಗಾ ಎನ್ನುತ್ತಿದ್ದಾರೆ. ದೇಶದ ಜನಕ್ಕೆ ಒಳ್ಳೇ ದಿನಗಳನ್ನು ಕರುಣಿಸದೆ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಮೋದಿ ಆಟ ಈ ಬಾರಿ ನಡೆಯದು. ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಪಕ್ಷ ಉಳಿವಿಗಾಗಿ ದೇವೇಗೌಡರು ಬಿಜೆಪಿ ಸಖ್ಯ ಬೆಳೆಸಿದ್ದಾರೆ. ನೀವು ತೀರ್ಮಾನ ಮಾಡಿ, ಎಲ್ಲ ರಾಜಕೀಯ ಅಧಿಕಾರಗಳು ಒಂದೇ ಕುಟುಂಬಕ್ಕೆ ಸೀಮಿತವಾಗಬೇಕಾ?, ಇಲ್ಲ ಸಾಮಾನ್ಯ ಜನರಿಗೆ ಅಧಿಕಾರ ಸಿಗಬೇಕಾ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದರು. ಕಡೂರು ಶಾಸಕ ಆನಂದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಮಾಜಿ ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಮುಖಂಡರಾದ ಅನುಪಮಾ, ಜೆ.ಎಂ.ರಾಮಚಂದ್ರ, ಎಚ್.ಎಸ್.ವಿಜಯ್‌ಕುಮಾರ್, ಎಂ.ಶಂಕರ್, ಯುವರಾಜ್, ಕಿಶೋರ್, ಬಾಗೂರು ಮಂಜೇಗೌಡ ಇದ್ದರು.