ಮರಳಿ ಕಾಂಗ್ರೆಸ್ ಗೂಡು ಸೇರಿದ ಕೆಕೆಆರ್: ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾದ ರಾಧಾಕೃಷ್ಣ

09_01_Mdy_08(Cong)
Published on

ಮಂಡ್ಯ: ಹಲವು ವರ್ಷ ಕಾಂಗ್ರೆಸ್‌ನಲ್ಲಿ ದುಡಿದು ರಾಜಕೀಯ ಬೆಳವಣಿಗೆ ನಡುವೆ ಜೆಡಿಎಸ್ ಸೇರಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಭಾವಿ ಮುಖಂಡ ಕೆ.ಕೆ.ರಾಧಾಕೃಷ್ಣ ಕೆ.ಕೆ.ರಾಧಾಕೃಷ್ಣ ಅವರು ಮತ್ತೆ ಮಾತೃಪಕ್ಷ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಸಮ್ಮುಖದಲ್ಲಿ ನೂರಾರು ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಕಾಂಗ್ರೆಸ್ ಬಾವುಟ ಸ್ವೀಕರಿಸುವ ಮೂಲಕ ಪಕ್ಷಕ್ಕೆ ವಾಪಸ್ ಮರಳಿದರು.

ರಾಧಾಕೃಷ್ಣ ಅವರ ತಂದೆ ಕೆಂಪೇಗೌಡರು 1967ರಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದರು. ಇಡೀ ಕುಟುಂಬ ಸುಮಾರು 50 ವರ್ಷ ಪಕ್ಷಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಈ ನಡುವೆ ರಾಜಕೀಯ ಬದಲಾವಣೆಯಿಂದಾಗಿ ರಾಧಾಕೃಷ್ಣ ಕೈ ಬಿಟ್ಟು ಹೊರೆ ಹೊತ್ತುಕೊಂಡರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುವುದಾಗಿ ಮನವೊಲಿಸಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಎಂ.ಶ್ರೀನಿವಾಸ್‌ಗೆ ಟಿಕೆಟ್ ನೀಡಲಾಗಿತ್ತು. ಇನ್ನು ಈ ಬಾರಿಯಾದರೂ ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆಯೂ ಹುಸಿಯಾಯಿತು.

ಜೆಡಿಎಸ್ ವರಿಷ್ಠರ ನಡೆಯಿಂದ ಬೇಸತ್ತಿದ್ದ ರಾಧಾಕೃಷ್ಣ ಪಕ್ಷದಿಂದ ಹಂತ ಹಂತವಾಗಿ ದೂರಾದರು. ಇತ್ತ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದಲ್ಲದೆ ಅಲ್ಲಿನ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಇದರ ಮಧ್ಯೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಯಾಗುವ ಮೂಲಕ ರಾಜಕೀಯದಲ್ಲಿ ಮತ್ತೊಂದು ಇನ್ನಿಂಗ್ಸ್‌ಗೆ ರಾಧಾಕೃಷ್ಣ ಸಜ್ಜಾಗಿದ್ದಾರೆ.

ಈ ವೇಳೆ ಮಾತನಾಡಿದ ಕೆಕೆಆರ್, ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಶಕ್ತಿಯುತವಾಗಿದೆ. ಸಾಂಪ್ರದಾಯಿಕ ಮತಗಳಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಪಕ್ಷವು ಜಯಭೇರಿ ಬಾರಿಸುವುದು ನಿಶ್ಚಿತ. ಇನ್ನು ಯಾವುದೇ ಪೂರ್ವ ಷರತ್ತು ಇಲ್ಲದೇ ಸೇರ್ಪಡೆಯಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆ ಮತ್ತು ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅವಿರತ ಶ್ರಮಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net