

ಶ್ರೀರಂಗಪಟ್ಟಣ: ಸಮಾಜದಲ್ಲಿನ ಹಿಂದುಳಿದ ವರ್ಗದ ಜನರು, ಬಡವರು ಹಾಗೂ ಶ್ರಮಿಕರ ಪಾಲಿಗೆ ಧ್ವನಿಯಾಗಿ ಸೇವೆ ಮಾಡಲು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಹಾಗೂ ರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮುಂಚೂಣಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ನೇಮಕಾತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರ ಸೇರಿದಂತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ. ಬಿಜೆಪಿಯ ದುರಾಡಳಿತದಿಂದ ವಿರೋಧಿ ಅಲೆ ಹಾಗೂ ಜೆಡಿಎಸ್‌ನಿಂದ ನೀಡಲು ಸಾಧ್ಯವಾಗದ ಪಾರದರ್ಶಕ ಹಾಗೂ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ ಎಂದರು.
ವಿಧಾನಸಭಾ ಚುನಾವಣಾ ಫಲಿತಾಂಶ ಮುಂಬರುವ ದೇಶದ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಜ.27ರಂದು ವಿಧಾನಸಭಾ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಪಕ್ಷದ ಎಸ್ಸಿ-ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ತಡಗವಾಡಿ ಯತೀಶ್, ಕಾಂಗ್ರೆಸ್ ಎಸ್ಸಿ-ಎಸ್ಟಿ ಮುಂಚೂಣಿ ಘಟಕದ ತಾಲೂಕು ಅಧ್ಯಕ್ಷ ಕೆ.ಶೆಟ್ಟಹಳ್ಳಿ ಗಂಗಾಧರ್, ಕೊತ್ತತ್ತಿ ಬ್ಲಾಕ್ ಅಧ್ಯಕ್ಷ ಸುಂಡಹಳ್ಳಿ ಸಿದ್ದರಾಜು, ಉಪಾಧ್ಯಕ್ಷ ಬೇಲೂರು ಕುಮಾರಸ್ವಾಮಿ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಕಾಂಗ್ರೆಸ್ ಮುಖಂಡರಾದ ಚನ್ನಪ್ಪನದೊಡ್ಡಿ ರಮೇಶ್, ಸೂನಗಹಳ್ಳಿ ಪ್ರಾಣೇಶ್, ಮರಕಾರದೊಡ್ಡಿ ಶ್ರೀಧರ್, ಸನೆಟ್ ಸದಸ್ಯ ಎಂ.ಎಸ್.ಸತೀಶ್, ಅರಕೆರೆ ಸಿದ್ದರಾಜು, ಮರಿಸ್ವಾಮಿ, ಬೆಳಗೊಳ ರಂಗಯ್ಯ, ಬಸವಯ್ಯ, ಎಂ.ಶೆಟ್ಟಹಳ್ಳಿ ರೇವಣ್ಣ, ಗಂಜಾಂ ಹೊನ್ನಪ್ಪ, ಮುಂಡುಗದೊರೆ ಮೋಹನ್, ಶ್ರೀಕಂಠು, ಬೇಲೂರು ಗ್ರಾಪಂ ಸದಸ್ಯೆ ಶಶಿಕಲಾ, ಹಂಪಾಪುರ ಮಮತಾ, ಗಂಜಾಂ ಸಾವಿತ್ರಿ ಇತರರು ಹಾಜರಿದ್ದರು.