

ಮಂಡ್ಯ: ಸತ್ಯಾಗ್ರಹದ ನೆಲ ಮದ್ದೂರಿನಲ್ಲಿ ಶನಿವಾರ ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಪ್ರಜಾಧ್ವನಿ ಯಾತ್ರೆ ನಡೆಯಿತು. ಆದರೆ ಇದಕ್ಕೆ ಸೆಡ್ಡು ಹೊಡೆದು ಸಮಾಜ ಸೇವಕ ಕದಲೂರು ಉದಯ್ ಪರ್ಯಾಯವಾಗಿ ಕಾರ್ಯಕರ್ತರ ಸಭೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಠಕ್ಕರ್ ಕೊಟ್ಟರು.
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರೆನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಪಕ್ಷದಿಂದ ಬಿ ಫಾರ್ಮ್ ಬಯಸಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಗುರುಚರಣ್ ಹೆಸರು ಮುಂಚೂಣಿಯಲ್ಲಿದೆ. ಆದರೂ ಕದಲೂರು ಉದಯ್ ಕೂಡ ಕೈ ಹಿಡಿಯಲಿದ್ದು, ಅವರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆನ್ನುವ ಚರ್ಚೆ ನಡೆಯುತ್ತಲೇ ಇದೆ. ಇದರ ಬಗ್ಗೆ ಕೈ ನಾಯಕರು ಯಾವುದೇ ಮಾಹಿತಿ ಹೊರಹಾಕುತ್ತಿಲ್ಲ. ಇತ್ತ ಕಾರ್ಯಕರ್ತರಲ್ಲಿಯೂ ಗೊಂದಲ ಹೆಚ್ಚಾಗಿದೆ. ಇನ್ನು ಪ್ರಜಾಧ್ವನಿ ಸಮಾವೇಶದಲ್ಲಾದರೂ ಅಭ್ಯರ್ಥಿಯ ಗುಟ್ಟು ಬಿಟ್ಟುಕೊಡಬಹುದೆನ್ನುವ ಕುತೂಹಲವೂ ಸುಳ್ಳಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎನ್ನುವ ಮೂಲಕ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದರು.
ಉದಯ್ ಸಭೆಗೆ ಕೈ ಕಾರ್ಯಕರ್ತರು: ಇತ್ತೀಚೆಗೆ ಸ್ಪರ್ಧೆ ಕುರಿತು ಮಾತನಾಡಿದ ಉದಯ್, ನಾನು ರಾಷ್ಟ್ರೀಯ ಪಕ್ಷದಿಂದಲೇ ಅಭ್ಯರ್ಥಿಯಾಗುತ್ತೇನೆಂದು ಘೋಷಣೆ ಮಾಡಿದ್ದರು. ಜತೆಗೆ ಇವರು ಕಾಂಗ್ರೆಸ್ ರಾಜ್ಯಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಗುಟ್ಟಾಗೆನೂ ಉಳಿದಿಲ್ಲ. ಇದು ಕಾಂಗ್ರೆಸ್ ಸೇರುತ್ತಾರೆನ್ನುವ ಮಾತನ್ನು ಗಟ್ಟಿಗೊಳಿಸಿತು. ಇದರ ವಿರುದ್ಧ ಸ್ಥಳೀಯ ಕೈ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಗುರುಚರಣ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಇದು ಕ್ಷೇತ್ರದಲ್ಲಿ ಕಾರ್ಯಕರ್ತರಿಗೂ ಗೊಂದಲ ಸೃಷ್ಟಿಸಿದೆ.
ಈ ನಡುವೆ ಮದ್ದೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಆಯೋಜಿಸಿದ್ದ ದಿನವೇ ಉದಯ್ ಕೂಡ ತಮ್ಮ ಕಚೇರಿಯ ಪಕ್ಕದ ಜಾಗದಲ್ಲಿ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದಾರೆ. ಮಾತ್ರವಲ್ಲದೆ ಸಾವಿರಾರೂ ಜನರನ್ನು ಸೇರಿಸಿ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಪ್ರದರ್ಶಿಸಿದ್ದಾರೆ. ಇನ್ನು ಪ್ರಜಾಧ್ವನಿಗೆ ಸವಾಲೆಸೆದು ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಕೂಡ ಭಾಗವಹಿಸುವ ಮೂಲಕ ತಮ್ಮ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಜತೆಗೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದಾರೆ. ಒಂದು ವೇಳೆ ಅವಕಾಶ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿದರೂ ಬೆಂಬಲಿಸುವುದಾಗಿ ಘೋಷಣೆ ಮಾಡಿ ತಮ್ಮ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದಾರೆ. ಈ ಬೆಳವಣಿಗೆ ಕೈ ನಾಯಕರನ್ನು ಚರ್ಚೆಗೆ ದೂಡುವಂತೆ ಮಾಡಿದೆ.
ಒಟ್ಟಾರೆ ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ಯಾರೆನ್ನುವ ವಿಚಾರ ಕಾವೇರ ತೊಡಗಿದ್ದು, ಮುಂದಿನ ದಿನದಲ್ಲಿ ಇದು ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಮೂಡಿಸಿದೆ.