

ಚಿಕ್ಕಮಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ. ಮೂಗು ಹಿಡಿದರೆ ಬಾಯಿ ಬಿಡಬೇಕಾಗುತ್ತೆ ಎನ್ನುತ್ತಾರಲ್ಲ ಹಾಗೆಯೇ ಪೆಟ್ರೋಲ್ ಡೀಸೆಲ್ ಬೇರೆ ಏರಿಕೆ ಆದರೆ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಲೇಸೆನ್ಸ್ ಕೊಟ್ಟಂತಾಗುತ್ತದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು.
ಕಷ್ಟದಲ್ಲಿರುವ ಜನರಿಗೆ ಸರ್ಕಾರ ಬೆಲೆ ಏರಿಕೆ ಬರೆ ಹಾಕಿದೆ. ಇದೊಂದು ಜನ ವಿರೋಧಿ ಸರ್ಕಾರ ಎನ್ನುವುದಕ್ಕೆ ಮತ್ತಿನ್ಯಾವ ಸರ್ಟಿಫಿಕೇಟ್ ನ ಅಗತ್ಯವು ಇಲ್ಲ. ಲೋಕಸಭೆ ಚುನಾವಣೆ ಸೋಲಿನ ಬಳಿಕ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕರ ಮೇಲೆ ಸೇಡು ತೀರಿಸಿಕೊಂಡು ಆಗಿದೆ. ಈಗ ಜನಸಾಮಾನ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೆಟ್ರೋಲ್ ರೇಟ್ ಜಾಸ್ತಿ ಮಾಡಿದಾಗ ಶವದ ಅಣಕು ಪ್ರದರ್ಶನ ಮಾಡಿದ್ದರು. ಈಗ ಅಂದು ಪ್ರತಿಭಟನೆ ಮಾಡಿದವರೇ ಪೆಟ್ರೋಲ್ ಬೆಲೆ ಜಾಸ್ತಿ ಮಾಡಿದ್ದಾರೆ. ಈಗ ಯಾರನ್ನು ಹೊತ್ತುಕೊಂಡು ಹೋಗಬೇಕು. ಈಗ ನಿಮ್ಮ ಸರ್ಕಾರವನ್ನೇ ಹೊತ್ತುಕೊಂಡು ಹೋಗಬೇಕಿದೆ. ರಾಜ್ಯದಲ್ಲಿರುವುದು ಸತ್ತು ಹೋಗಿರುವ ಸರ್ಕಾರ. ಜನರೇ ಈ ಸರ್ಕಾರವನ್ನು ಧಪನ್ ಮಾಡೋ ದಿನ ಬರಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮಾಡಿರುವುದು ಬೆಲೆ ಏರಿಕೆ ಹಾಗೂ ಲೂಟಿ ಇವೆರಡನ್ನೇ. ಓಲೈಕೆ ರಾಜಕಾರಣಕ್ಕೆ ಗ್ಯಾರಂಟಿ ಆಸೆ ತೋರಿಸಿದ್ದಿರಿ. ಅದು ಧಕ್ಕದಿದ್ದಾಗ ಬೆಲೆ ಏರಿಕೆ ಮಾಡಿದ್ದೀರಾ. ನಾಚಿಕೆ, ಮಾನ, ಮರ್ಯಾದೆ ಅನ್ನುವುದರಲ್ಲಿ ಯಾವುದನ್ನಾದರೂ ಇಟ್ಕೊಂಡು ಇದನ್ನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.