ದೇಶ ಒಂದಾಗಿರೋದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ

Eshwarappa KS
Published on

ರಾಯಚೂರು: ದೇಶ ಒಂದಾಗಿರೋದು ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ. ಹೀಗಾಗಿ ಬಜೆಟ್‌ನಲ್ಲೂ ಉತ್ತರ ಭಾರತ ದಕ್ಷೀನ ಭಾರತ ಅಂತಿದಾರೆ. ದೇಶ ಒಡೆಯುವದಲಿ ಕಾಂಗ್ರೆಸ್‌ನವರು ಸಿದ್ಧಹಸ್ತರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಮಾತಾ ಮಾಣಿಕೇಶ್ವರಿ ದೇವಸ್ಥಾನದಲ್ಲಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದರು. ಡಿ.ಕೆ.ಸುರೇಶ ಕೂಗಿದ ತಕ್ಷಣ ದೇಶವನ್ನು ಒಡೆಯೋಕೆ ಆಗಿಲ್ಲ. ಯಾವುದೇ ರಾಜಕಾರಣಿಗೂ ಆಗೊಲ್ಲ ಎಂದರು.
ಕೇಂದ್ರದ ಮಧ್ಯಂತರ ಬಜೆಟ್ ಬಡವ, ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಯುವಕರು, ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಗಮನ ಹರಿಸಲಾಗಿದ್ದು, ಜನಪರವಾದ ಬಜೆಟ್ ಆಗಿದೆ.
ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಪ್ರಧಾನಿ ಮೋದಿ ಹೋಗಿರುವುದರಿಂದ ಅಪವಿತ್ರವಾಗಿ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಗುರ್ಭಗುಡಿಗೆ ಹೋಗುವ ಸಮಯದಲ್ಲಿ ಅವರು ಎಷ್ಟು ಪಾವಿತ್ರತೆ ಕಾಪಾಡಿದ್ದಾರೆ ಎನ್ನುವುದು ಮುಖ್ಯ. ಅವರು ಯಾವ ಜಾತಿಯಲ್ಲಿ ಹುಟ್ಟಿದ್ದಾರೆ ಎನ್ನುವುದಲ್ಲ. ಮೋದಿ ಯಾವ ಜಾತಿ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಈ ಹಿಂದೆ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ ರಾಮಮಂದಿರಕ್ಕೆ ದಲಿತ ಅರ್ಚಕರನ್ನು ನೇಮಕ ಮಾಡಬೇಕು ಎಂದು ಹೇಳಿದ್ದರು. ರಾಮಮಂದಿರಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದೇ ದಲಿತರು ಎನ್ನುವುದನ್ನು ಅಂದೇ ಅವರಿಗೆ ಹೇಳಿದ್ದೆ. ಆದರೆ ಈಗಲು ಧರ್ಮ, ಜಾತಿಯ ಹೆಸರಿನಲ್ಲಿ ಕಾಂಗ್ರೆಸ್‌ನವರು ದೇಶವನ್ನು ಒಡೆಯಲು ಮುಂದಾಗಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಂಡೇಶ ವಲ್ಕಂದಿನ್ನಿ, ಗಿರೀಶ ಕನಕವೀಡು, ಎ.ಚಂದ್ರಶೇಖರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net