

ಚಿಕ್ಕಬಳ್ಳಾಪುರ: ನಿರೀಕ್ಷೆಯಂತೆ ಚಿಕ್ಕಬಳ್ಳಾಪುರ ನಗರಸಭೆಯ ಕಾಂಗ್ರೆಸ್ ನ 6 ಸದಸ್ಯರಿಗೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದು ಪಕ್ಷದ ವಿಪ್ ಆದೇಶ ಉಲ್ಲಂಘನೆಯ ಪ್ರಕರಣದ ವಿಚಾರಣೆಯ ಪ್ರಕ್ರಿಯೆ ಪ್ರಾರಂಭವಾಗಿದೆ.
ನಗರಸಭಾ ಸದಸ್ಯರಾದ ರತ್ನಮ್ಮ( ವಾರ್ಡ್ 2), ಸ್ವಾತಿ ಮಂಜುನಾಥ್ (ವಾರ್ಡ್ 22), ಅಂಬಿಕಾ (ವಾರ್ಡ್ 24), ವಿ.ನೇತ್ರಾವತಿ ( ವಾರ್ಡ್ 27), ಸತೀಶ್ (ವಾರ್ಡ್ 7), ನಿರ್ಮಲಪ್ರಭುಗೆ( ವಾರ್ಡ್ 13) ನ.6 ರಂದು ಮಧ್ಯಾಹ್ನ3 ಕ್ಕೆ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಒಂದು ವೇಳೆ ಬಾರದಿದ್ದಲ್ಲಿ ಹೇಳಿಕೆ ಯಾವುದು ನೀಡುವುದು ಇರುವುದಿಲ್ಲ ಎಂಬುದಾಗಿ ಪರಿಗಣಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವುದರ ಬಗ್ಗೆಯೂ ತಿಳಿಸಲಾಗಿದೆ.
*ಜಿಲ್ಲಾಧಿಕಾರಿಗೆ ಕಾಂಗ್ರೆಸ್ ದೂರು*
ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವಿಪ್ ಆದೇಶ ಉಲ್ಲಂಘಿಸಿ, ಮತ ಚಲಾಯಿಸಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ನಗರಸಭಾ ಕಾಂಗ್ರೆಸ್ ಸದಸ್ಯ ಟಿ.ಜಿ.ಅಂಬರೀಷ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಪಕ್ಷಾಂತರ ಕಾಯ್ದೆಯಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಸದಸ್ಯತ್ವವನ್ನು ರದ್ದುಪಡಿಸಲು ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ವಿಚಾರಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಸಂಬಂಧಪಟ್ಟ ಸದಸ್ಯರಿಗೆ ದಾಖಲೆಗಳೊಂದಿಗೆ ಬರಲು ಆದೇಶಿಸಿದ್ದಾರೆ.
*ಚುನಾವಣೆಯಲ್ಲಿ ಅಡ್ಡ ಮತದಾನ*
ನಗರಸಭೆಯಲ್ಲಿ 31 ಸದಸ್ಯರಿದ್ದು ಈ ಪೈಕಿ ಕಾಂಗ್ರೆಸ್ 16, ಬಿಜೆಪಿ 9, ಪಕ್ಷೇತರ 4, ಜೆಡಿಎಸ್ 2 ಸದಸ್ಯರು ಸೇರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಗಜೇಂದ್ರ 19 ಮತಗಳು ಮತ್ತು ಕಾಂಗ್ರೆಸ್ ನ ಟಿ.ಜಿ.ಅಂಬರೀಷ್ 16 ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಜೆ.ನಾಗರಾಜ್ 19 ಮತಗಳು ಮತ್ತು ಕಾಂಗ್ರೆಸ್‌ನ ಮೀನಾಕ್ಷಿ ವೆಂಕಟೇಶ್ 15 ಮತಗಳನ್ನು ಪಡೆದುಕೊಂಡಿದ್ದರು.
ಕಾಂಗ್ರೆಸ್‌ನ ಸದಸ್ಯರ ಪೈಕಿ 6 ಮಂದಿ ಸದಸ್ಯರು ಮಾತೃಪಕ್ಷಕ್ಕೆ ಕೈ ಕೊಟ್ಟು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ, ಗೆಲ್ಲಿಸಿದ್ದಾರೆ.
*ಅಲ್ಪಾವಧಿಯ ಅಧಿಕಾರದ ಧೈರ್ಯ*
ನಗರಸಭಾ ಸದಸ್ಯರ ಅಧಿಕಾರದಾವಧಿ ಇನ್ನೂ ಒಂದು ವರ್ಷ ಮಾತ್ರ ಇದೆ. ಇದು ಮುಗಿದ ಬಳಿಕ ಹೊಸದಾಗಿ ಚುನಾವಣೆಯನ್ನು ಎದುರಿಸಬೇಕು. ಇನ್ನೂ ವಿಪ್ ಆದೇಶದ ಉಲ್ಲಂಘನೆಗೆ ಪ್ರಕರಣದ ಜಿಲ್ಲಾಧಿಕಾರಿಗಳ ಹಂತದ ವಿಚಾರಣೆ, ನ್ಯಾಯಾಲಯ ದಾವೆ ಹೂಡುವುದು ಮತ್ತು ವಿಚಾರಣೆ ಸೇರಿದಂತೆ ನಾನಾ ಪ್ರಕ್ರಿಯೆಗಳು ನಡೆಯುವುದರಷ್ಟರಲ್ಲಿ ಅಧಿಕಾರಾವಧಿ ಮುಗಿದು ಹೋಗಿರುತ್ತದೆ. ಒಂದು ವೇಳೆ ನಕಾರಾತ್ಮಕ ಬೆಳವಣಿಗೆಯ ಫಲಿತಾಂಶ ಬಂದರೂ ನಗರಸಭಾ ಸದಸ್ಯರ ಚುನಾವಣೆಗೆ ಕುಟುಂಬಸ್ಥರ ಪೈಕಿ ಇತರೆ ಯಾರನ್ನಾದರೂ ನಿಲ್ಲಿಸಬಹುದು ಎಂಬ ಲೆಕ್ಕಾಚಾರವನ್ನು ವಿಚಾರಣೆಗೆ ಹಾಜರಾಗುತ್ತಿರುವ ಸದಸ್ಯರು ಹಾಕಿದ್ದಾರೆ ಎನ್ನಲಾಗಿದೆ.
*ಸ್ವಪಕ್ಷೀಯರಿಗೆ ಪಾಠ ಕಲಿಸುವ ಆಕ್ರೋಶ*
ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಸ್ಪಷ್ಟ ಬಹುಮತವನ್ನು ಹೊಂದಿದ್ದರೂ ಕೈ ಅಭ್ಯರ್ಥಿಗಳು ಮುಖಭಂಗ ಅನುಭವಿಸಿದ್ದರು.
ಸಂಸದ ಡಾ ಕೆ.ಸುಧಾಕರ್ ತಂತ್ರಗಾರಿಕೆಯಲ್ಲಿ ಬಿಜೆಪಿ ಗೆಲುವಿನ ನಗೆಬೀರಿತು. ಇದಕ್ಕೆ ಆಕ್ರೋಶದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿಪ್ ಉಲ್ಲಂಘಿಸಿ, ಪಕ್ಷಕ್ಕೆ ದ್ರೋಹವೆಸಗಿದವರಿಗೆ ಪಾಠ ಕಲಿಸಲಾಗುವುದು. ಸದಸ್ಯತ್ವ ರದ್ದು ಮಾಡಿಸುವವರೆಗೂ ಬಿಡುವುದಿಲ್ಲ ಎಂದು ಗುಡುಗಿದ್ದರು.