

ಹುಬ್ಬಳ್ಳಿ: ಕೇಂದ್ರದ ಅನುದಾನ ಹಂಚಿಕೆ ವಿಷಯದಲ್ಲಿ ಕರ್ನಾಟಕ ಸರ್ಕಾರವು ಜಾಹೀರಾತಿನ ಮೂಲಕ ಸುಳ್ಳಿನ ಕಥೆ ಕಟ್ಟುತ್ತಿದೆ. ಹಾಗೆ ನೋಡಿದರೆ ಯುಪಿಎ ಸರ್ಕಾರ ಇದ್ದಾಗ ಕರ್ನಾಟಕಕ್ಕೆ ಕೇವಲ 80 ಸಾವಿರ ಕೋಟಿ ರೂ. ನೀಡಿದ್ದರು. ಪ್ರಧಾನಿ ಮೋದಿ ಸರ್ಕಾರವು 2.93 ಲಕ್ಷ ಕೋಟಿ ರೂ. ಕೊಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಇಲ್ಲಿಯ ವಿದ್ಯಾನಗರ ಎಂ.ಆರ್. ಸಾಖರೆ ಸ್ಕೂಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಧಾರವಾಡ ಲೋಕಸಭಾ ಕ್ಷೇತ್ರದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಭಾರತ ಸರ್ಕಾರವು ಕರ್ನಾಟಕಕ್ಕೆ ನಾಲ್ಕು ಪಟ್ಟು ಅನುದಾನ ಹೆಚ್ಚಿಸಿದೆ. ಇಷ್ಟಿದ್ದರೂ ಸುಳ್ಳು ಆರೋಪ ಹೇಗೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ಮಗಳ ಹತ್ಯೆಯಾದರೆ ವಿಷಾದ ವ್ಯಕ್ತಪಡಿಸುವುದು ಬಿಟ್ಟು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ಸೇರಿ ಎಲ್ಲ ನಾಯಕರೂ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಇಂತಹ ರಾಜಕಾರಣ ಏಕೆ ಮಾಡುತ್ತೀರಿ, ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂದಿರಗಳ ಮೇಲೆ ತೆರಿಗೆ ಹಾಕಿದರು.
ಹನುಮಾನ ಚಾಲೀಸಾ ಪಠಿಸಿದವರ ಮೇಲೆ ಹಲ್ಲೆ ನಡೆಯಿತು. ಬಿಜೆಪಿಯ ಐದು ವರ್ಷದ ಆಡಳಿತದಲ್ಲಿ ಶಾಂತ ಇದ್ದ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಆಯಿತು. ಇಂತಹ ಅಸುರಕ್ಷತೆಯ ಸರ್ಕಾರ ಅಧಿಕಾರದಲ್ಲಿ ಇರಬೇಕೆ ಎಂದು ಪ್ರಶ್ನಿಸಿದರು.
ಹಿಂದಿನ ಯುಪಿಎ ಸರ್ಕಾರ ಗಗನ, ಸಮುದ್ರ, ಪಾತಾಳ, ಭೂಮಿ ಎಲ್ಲಿಯೂ ಬಿಡಲಿಲ್ಲ. ಎಲ್ಲ ಕಡೆ ಭ್ರಷ್ಟಾಚಾರ ಮಾಡಿ ಬೆಣ್ಣೆ ತಿಂದರು ಎಂದು ಗೇಲಿ ಮಾಡಿದ ನಡ್ಡಾ ಅವರು, ನರೇಂದ್ರ ಮೋದಿ ಅವರು ಯಾವುದೇ ಭ್ರಷ್ಟಾಚಾರ ಇಲ್ಲದೇ ಸ್ವಚ್ಛ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತನಿಗೂ ಉನ್ನತ ಸ್ಥಾನಮಾನ ಸಿಗುತ್ತದೆ. ಆದರೆ. ಅದೇ ಕಾಂಗ್ರೆಸ್ನಲ್ಲಿ ಅವರದೇ ನಾಯಕರು, ಕಾರ್ಯಕರ್ತರಿಗೆ ತೊಂದರೆಯಾದರೂ ವಿಷಾದ ವ್ಯಕ್ತಪಡಿಸುವುದಿಲ್ಲ. ನೇಹಾ ಕೊಲೆ ಪ್ರಕರಣದಲ್ಲಿ ಅವರ ಕುಟುಂಬದವರಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಯುಪಿಎ ಕಾಲ ಎಂದರೆ ಅದು ಹಗರಣ, ಭಯೋತ್ಪಾದಕರ ಅಟ್ಟಹಾಸದ ಕಾಲ. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ತುಷ್ಟೀಕರಣ ಮಿತಿ ಮೀರಿದೆ. ಓಲೈಕೆ ರಾಜಕಾರಣ ಕಾಂಗ್ರೆಸ್ನ ನೀತಿ. ಆದರೆ, ಸುರಕ್ಷಿತ ಭಾರತ ನಿರ್ಮಾಣ ಬಿಜೆಪಿಯ ಗುರಿ. ಹಾಗಾಗಿ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಶಾಸಕ ಪ್ರದಿಪ ಶೆಟ್ಟರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗೂ ಸುರಕ್ಷತೆ ಎಂಬುದು ಇಲ್ಲ. ಹಾಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶಕ್ಕೆ ಉತ್ತಮ ನಾಯಕತ್ವ ಸಿಕ್ಕಿದೆ ಎಂಬುದು ಪುಲ್ವಾಮಾ ದಾಳಿ, ಉಕ್ರೇನ್ ಯುದ್ಧ ಮುಂತಾದ ಘಟನಾವಳಿಗಳ ನಂತರ ಎಲ್ಲರ ಅರಿವಿಗೆ ಬಂದಿದೆ. ಹಾಗಾಗಿ ಮುಂದೆಯೂ ಈ ಸರ್ಕಾರ ಬೇಕು ಎಂಬುದು ಎಲ್ಲರ ಆಶಯ ಆಗಿದೆ ಎಂದರು.
ಹತ್ಯೆಯಾದ ನೇಹಾ ಹಿರೇಮಠ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.
ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಅಮೃತ ದೇಸಾತಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಮೇಯರ್ ವೀಣಾ ಬರದ್ವಾಡ, ಮಹೇಂದ್ರ ಕೌತಾಳ, ಬಸವರಾಜ ಕುಂದಗೋಳಮಠ, ಇತರರು ಪಾಲ್ಗೊಂಡಿದ್ದರು.