ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿರುವ ಕಾಂಗ್ರೆಸ್ ಪಕ್ಷ, ರಾಘವೇಂದ್ರ ಕಿಡಿ

mp B y Raghavendra
Published on

ಶಿವಮೊಗ್ಗ: ಶತ್ರು ರಾಷ್ಟ್ರದ ವಿರುದ್ಧ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳಿಗೆ ದಾಖಲೆ ಕೇಳಿದ್ದ ಕಾಂಗ್ರೆಸ್ ಪಕ್ಷ ಈಗ ತಮ್ಮ ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದೆ. ಯಾವಾಗ ವಾಸ್ತವ ಸತ್ಯ ಅವರಿಗೆ ಪ್ರತಿಕೂಲವಾಗಿರುತ್ತದೆಯೋ, ಅದನ್ನು ಪ್ರಶ್ನಿಸುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗುತ್ತಿಗೆದಾರರು, ಪ್ರಾಮಾಣಿಕ ಅಧಿಕಾರಿಗಳು ಮತ್ತು ಸಾಮಾನ್ಯ ನಾಗರಿಕರ ಆಕ್ರೋಶದಲ್ಲಿಯೇ ದಾಖಲೆ ಅಡಗಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕಾಂಗ್ರೆಸ್ ಸಚಿವರು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಜನರ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದ ಕುರಿತಂತೆ ಜನಸಾಮಾನ್ಯರು, ಮಾಧ್ಯಮಗಳು ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟಾಚಾರದ ಕುರಿತು ದಾಖಲೆಗಳನ್ನು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಭ್ರಷ್ಟಾಚಾರದಲ್ಲಿ ದಾಖಲೆ ಬರೆಯುತ್ತಿರುವ ಸರ್ಕಾರ ಪ್ರತಿಪಕ್ಷಗಳ ಬಳಿ ದಾಖಲೆ ಕೇಳುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ದೂರಿದ್ದಾರೆ.

ಜನಪ್ರತಿನಿಧಿಗಳಾಗಿ ಜನರ ಪರವಾಗಿ ಮಾತನಾಡಿದರೆ ಸುಳ್ಳು, ಅಧಿಕಾರದ ದರ್ಪ, ಉಡಾಫೆಯಿಂದ ಪ್ರತಿಕ್ರಿಯೆ ನೀಡುವುದೇ ಕಾಂಗ್ರೆಸ್ ಸಚಿವರು ದೊಡ್ಡಸ್ತಿಕೆ ಎಂದುಕೊಂಡಿದ್ದಾರೆ. ರಾಜ್ಯದ ಅತ್ಯಂತ ದುರ್ಬಲ ಸಮುದಾಯಗಳ ಕಲ್ಯಾಣಕ್ಕಾಗಿ ನಿಗದಿಯಾಗಿದ್ದ ಕೋಟಿಗಟ್ಟಲೆ ಹಣದ ಲೂಟಿ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಈ ಸರ್ಕಾರದ್ದೇ ಕರ್ಮಕಾಂಡವಲ್ಲವೇ? ದುರಂತವೆಂದರೆ, ನಮ್ಮ ಜಿಲ್ಲೆಯ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡರೂ ಇವರದ್ದೇ ಸಚಿವ ರಾಜಿನಾಮೆ ನೀಡಿ ಬಂಧಿಸಲ್ಪಟ್ಟರೂ ಕಿಂಚಿತ್ತೂ ಸಂವೇದನೆ, ನೈತಿಕತೆ ಇಲ್ಲದೆ ಭ್ರಷ್ಟಾಚಾರದ ದಾಖಲೆ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net