

ಮೈಸೂರು: ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಜೂ.10 ರಂದು ಜಿಲ್ಲೆಗೆ ಆಗಮಿಸಲಿದ್ದು, ಅವರಿಗೆ ಅದ್ದೂರಿಯ ಸ್ವಾಗತ ಕೋರಲು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲೆಯವರೇ ಆದ ದೇವರಾಜ ಅರಸು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅದಾದ ನಂತರ ಜಿಲ್ಲೆಯವರಾದ ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿರುವುದು ಹೆಮ್ಮೆಯ ವಿಚಾರ. ಅದರಲ್ಲೂ ವಿಶೇಷವಾಗಿ ವರುಣ ಕ್ಷೇತ್ರದಿಂದ ಅಯ್ಕೆಗೊಂಡು ಎರಡು ಬಾರಿ ಅವರು ಮುಖ್ಯಮಂತ್ರಿಯಾಗಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಿಳಿಗೆರೆ ಗ್ರಾಮದಲ್ಲಿ ಮತದಾರರಿಗೆ ಹಮ್ಮಿಕೊಂಡಿರುವ ಕೃತಜ್ಞತಾ ಸಮಾರಂಭದಲ್ಲಿ ಈ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ಅದ್ಧೂರಿಯ ಸ್ವಾಗತ ಹಾಗೂ ಸನ್ಮಾನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾ ಗುವುದು. ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಸಮಾರಂಭಕ್ಕೆ ಆಗಮಿಸುವ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಸುತ್ತೂರು ಗ್ರಾಮದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ನಂತರ ಅವರು ಬಿಳಿಗೆರೆ ಗ್ರಾಮಕ್ಕೆ ತೆರೆದ ವಾಹನದಲ್ಲಿ ತೆರಳಲಿದ್ದಾರೆ. ಮಾರ್ಗದ ಮಧ್ಯೆ 40 ರಿಂದ 50 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಆಯ್ಕೆಗೊಂಡ ಸಂದರ್ಭ ಅವರನ್ನು ಎಪಿಎಂಸಿ ಜಂಕ್ಷನ್‌ನಲ್ಲಿ 10 ಸಾವಿರ ಕಾರ್ಯಕರ್ತರು ಸ್ವಾಗತ ಕೋರಿದ್ದರು. ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಅದ್ದೂರಿಯ ಸ್ವಾಗ ಕೋರಬೇಕು. ಹಾಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಹಿರಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಬರಬೇಕು. ಸಮಾರಂಭಕ್ಕೆ ಮೆರಗು ನೀಡಲು ಕಲಾತಂಡಗಳ ವ್ಯವಸ್ಥೆ ಮಾಡಬೇಕು. ಎಲ್ಲಾ ವಿಭಾಗಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಲು ವಿರೋಧ ಪಕ್ಷಗಳು ಸಾಕಷ್ಟು ಸಂಚು ಮಾಡಿದ್ದವು. ಹಣದ ಹೊಳೆಯನ್ನೇ ಹರಿಸಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಹಿನ್ನಡೆಯುಂಟು ಮಾಡಬೇಕು ಎಂದು ಕುತಂತ್ರ ಮಾಡಲಾಗಿತ್ತು. ಆದರೆ, ವರುಣ ಕ್ಷೇತ್ರದ ಜನತೆ ಮನೆ ಮಗನಂತಿರುವ ಸಿದ್ದರಾಮಯ್ಯ ಅವರನ್ನು ಭಾರಿ ಅಂತರದಿಂದ ಆಯ್ಕೆ ಮಾಡಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ಕಾರಣಕರ್ತರಾಗಿದ್ದಾರೆ. ಮೊದಲ ಬಾರಿಗೆ ಮೈಸೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಘಟಕಗಳ ಕಾರ್ಯಕರ್ತರು ಮುಂದಾಗಬೇಕು ಎಂದರು.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಹೊಸಯುಗ ಆರಂಭವಾಗಿದೆ. ಕಾರ್ಯಕರ್ತರಲ್ಲಿ ಇರುವ ಉತ್ಸಾಹ ಇನ್ನಷ್ಟು ಹೆಚ್ಚಾಗಬೇಕು. ವಿಧಾನಸಭಾ ಚುನಾವಣೆಯಂತೆ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಶಾಸಕ ಬನ್ನೂರು ಕೃಷ್ಣಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ, ನಗರಾಧ್ಯಕ್ಷೆ ಪುಷ್ಪಾಲತಾ ಚಿಕ್ಕಣ್ಣ, ಸಭೆಯಲ್ಲಿ ಕಾಂಗ್ರೆಸ್ ನಗರಾದ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಚಂದ್ರಮೌಳಿ, ಮಾಜಿ ಮೇಯರ್ ಚಿಕ್ಕಣ್ಣ, ಮುಖಂಡರಾದ ಶಿವ ನಾಗಪ್ಪ, ಮಂಜುಳಾ ಮಾನಸ, ಕೂರ್ಗಳ್ಳಿ ಮಹದೇವ್, ಪ್ರೊ.ಶಿವಪ್ರಸಾದ್, ಶಿವಪ್ರಸಾದ್, ಗಿರೀಶ್, ಈಶ್ವರ ಚಕ್ಕಡಿ, ಡಿ.ನಾಗಭೂಷಣ್ ಹಾಗೂ ಇತರರು ಇದ್ದರು.