ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ

15 sgr 3
Published on

ಸಾಗರ: ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಅತಿಹೆಚ್ಚು ಸ್ಥಾನ ಗಳಿಸಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಡಿ. 22ರಂದು ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಹಾಗೂ ಡಿ.27ರಂದು ಸಾಗರ, ಸೊರಬ, ಹೊಸನಗರ ತಾಲೂಕುಗಳ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೆ ಕಾಂಗ್ರೆಸ್​ನಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೋಟು ಅಮಾನ್ಯಕರಣದಿಂದ ಹಿಡಿದು ಈತನಕ ಜನಪರವಾಗಿ ಒಂದೂ ಕಾಯ್ದೆ ಜಾರಿಗೆ ತಂದಿಲ್ಲ. ದೇಶದಲ್ಲಿ ಕೇಂದ್ರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕರೊನಾ ಸಂದರ್ಭದಲ್ಲಿ ಅಸಮರ್ಪಕ ನಿರ್ವಹಣೆ, ಭ್ರಷ್ಟಾಚಾರ ಜನರ ಅರಿವಿಗೆ ಬಂದಿದೆ. ಇದರ ಜತೆ ಕಾರ್ವಿುಕ, ರೈತ, ಎಪಿಎಂಸಿ, ವಿದ್ಯುತ್ ಕಾಯ್ದೆ ಜಾರಿ ಸಹ ಮಾರಕವಾಗಿ ಪರಿಣಮಿಸಿದೆ. ಇದೆಲ್ಲ ಜನರ ಅರಿವಿಗೆ ಬಂದಿದ್ದು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ಮನ್ನಣೆ ನೀಡಲಿದ್ದಾರೆ ಎಂದು ತಿಳಿಸಿದರು.

ಜನರ ದಿಕ್ಕು ತಪ್ಪಿಸಲು ಸರ್ಕಾರ ಗೋಹತ್ಯಾ ನಿಷೇಧದಂತಹ ಕಾಯ್ದೆ ಜಾರಿಗೆ ತಂದು ಭಾವನಾತ್ಮಕ ಸಂಗತಿ ಇರಿಸಿಕೊಂಡು ಚುನಾವಣೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಆಹಾರ ಮತ್ತು ನರೇಗಾ ಯೋಜನೆಗೆ ಸರಿಯಾಗಿ ಹಣ ನೀಡುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬಿಜೆಪಿಯವರು ಸುಳ್ಳು ಹೇಳಿ ರಾಜಕಾರಣ ಮಾಡುತ್ತಿದ್ದು ಇದು ಜಾಸ್ತಿ ದಿನ ನಡೆಯುವುದಿಲ್ಲ ಎಂದರು.

ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಎದ್ದಿದೆ. ಸಾಮಾಜಿಕ ಭದ್ರತೆ ಯೋಜನೆಗಳ ಫಲಾನುಭವಿಗಳಿಗೆ ಏಳೆಂಟು ತಿಂಗಳಿನಿಂದ ಹಣ ನೀಡಿಲ್ಲ. ವಸತಿ ಸಚಿವರು ಸ್ಥಳೀಯ ಶಾಸಕರ ಮೂಲಕ 20 ಮನೆಗಳನ್ನು ಕೊಡಲು ಆದೇಶಿಸಿದ್ದಾರೆ. ಆದರೆ ಫಲಾನುಭವಿಗಳಿಗೆ ಮನೆ ನೀಡುವಾಗ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಬೇಕೆನ್ನುವ ಕನಿಷ್ಠ ಜ್ಞಾನ ಕೂಡ ವಸತಿ ಸಚಿವರಿಗಿಲ್ಲ ಎಂದು ಲೇವಡಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿಪಂ ಸದಸ್ಯ ಕಲಗೋಡು ರತ್ನಾಕರ್, ತುಕಾರಾಮ್ ಬಿ.ಶಿರವಾಳ, ಎಲ್.ಟಿ.ತಿಮ್ಮಪ್ಪ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net