ಶಿವಮೊಗ್ಗ ಪಾಲಿಕೆಗೆ ರೇಖಾ ರಂಗನಾಥ್ ಪ್ರತಿಪಕ್ಷ ನಾಯಕಿ

rekha
Published on

ಶಿವಮೊಗ್ಗ: ನಗರ ಪಾಲಿಕೆಯ ಹಿರಿಯ ಸದಸ್ಯರು ಹಾಗೂ ಪಕ್ಷದ ಮುಖಂಡರ ಸಲಹೆ ಪಡೆದು ಕಾರ್ಯನಿರ್ವಹಿಸುವುದಾಗಿ ನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್ ಹೇಳಿದರು.

ಸೋಮವಾರ ನಗರ ಪಾಲಿಕೆ ಪ್ರತಿಪಕ್ಷ ನಾಯಕಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮರ್ಥ ಹಾಗೂ ರಚಾನ್ಮತಕವಾಗಿ ಕೆಲಸ ಮಾಡುತ್ತೇನೆ. ಪಕ್ಷದ ಪ್ರಮುಖರು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದರು.

ಆಡಳಿತ ಪಕ್ಷದ ತಪ್ಪು ನಡೆಗಳನ್ನು ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾಪಿಸಿ ಜನರಿಗೆ ಉತ್ತಮ ಆಡಳಿತ ದೊರೆಯುವಂತೆ ಮಾಡುತ್ತೇನೆ. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಸಾರ್ವಜನಿಕರು ನನ್ನ ಗಮನಕ್ಕೆ ಯಾವುದೇ ಸಮಸ್ಯೆಗಳನ್ನು ತಂದರೂ ಅದಕ್ಕೆ ಪರಿಹಾರ ಒದಗಿಸಲು ನೆರವಾಗುತ್ತೇನೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಕಾಮಗಾರಿ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಬೀದಿ ದೀಪ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗುವುದು. ನಗರ ಪಾಲಿಕೆಯಲ್ಲಿ ಕೇಳಿ ಬರುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ಪಕ್ಷದ ಗಮನಸೆಳೆಯಲಾಗುವುದು ಎಂದು ತಿಳಿಸಿದರು.

ಶಾಸಕ ಕೆ.ಎಸ್. ಈಶ್ವರಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಈ ಸಂದರ್ಭದಲ್ಲಿದ್ದರು.

ರೇಖಾ ರಂಗನಾಥ್ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ನಗರ ಪಾಲಿಕೆ ಹೊರ ಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net