

ಮಂಡ್ಯ: ಭಾರತ್ ಜೋಡೋ ಪಾದಯಾತ್ರೆಯ ರೂವಾರಿ ರಾಹುಲ್ಗಾಂಧಿ ಅವರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಮಂಡ್ಯ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 29 ದಿನಗಳ ಕಾಲ ಪಾದಯಾತ್ರೆ ಮಾಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ತಿಳಿಸಿದರು.
ಪಕ್ಷಕ್ಕೆ ಬಲ ತುಂಬುವ ಉದ್ದೇಶದಿಂದ ಕಾಂಗ್ರೆಸ್ ಗೆಲ್ಲಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ಧ್ಯೇಯೋದ್ದೇಶದೊಂದಿಗೆ ಏ.11ರಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಪಾದಯಾತ್ರೆ ಆರಂಭವಾಗಲಿದೆ. 15 ದಿನ ನಾಗಮಂಗಲ ಹಾಗೂ ಆನಂತರದ 14 ದಿನ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಸಾಗಲಿದೆ. ಪ್ರತಿದಿನ 20 ಕಿ.ಮೀನಂತೆ ಒಟ್ಟು 580 ಕಿ.ಮೀ ಪಾದಯಾತ್ರೆ ಸಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪಾದಯಾತ್ರೆಯಲ್ಲಿ ಎದುರಾಗುವ ಜನಸಾಮಾನ್ಯರನ್ನು ಮುಖಾಮುಖಿಯಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿವೇದಿಸುವ ಉದ್ದೇಶದಿಂದ ಪಾದಯಾತ್ರೆ ಸಾಗಲಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಜನತೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಹಿರಿಯ ಸಹಕಾರಿ ಧುರೀಣ ಕೌಡ್ಲೆ ಚನ್ನಪ್ಪ, ಎಸ್ಸಿ ಮತ್ತು ಎಸ್ಟಿ ಘಟಕ ಅಧ್ಯಕ್ಷ ಸುರೇಶ್ ಕಂಠಿ, ಮುಖಂಡರಾದ ಕ್ರಾಂತಿಸಿಂಹ, ವೀಣಾ ಶಂಕರ್, ಹರ್ಷವರ್ಧನ, ಸುಧಾ ಉಪಸ್ಥಿತರಿದ್ದರು.