

ಮೈಸೂರು: ನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಪ್ರತ್ಯೇಕ ಪ್ರತಿಭಟನೆ ನಡೆದವು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಿಟಿ ರವಿ ಅವರು ಮಾತೃ ಹೃದಯವಿರುವ ಸೋನಿಯಾಗಾಂಧಿ ಬಗ್ಗೆ ಅವಹೇಳನವಾಗಿ ಮಾತನಾಡಿ ತಮ್ಮ ವ್ಯಾಘ್ರ ಮುಖ ತೋರಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನ, ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬದವರು. ಅಂತಹ ಕುಟುಂಬದ ವಿರುದ್ಧ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಸಿಟಿ ರವಿ ಕುಡಿದ ಮತ್ತಿನಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಿಜೆಪಿಯಲ್ಲಿ ದೇಶಕ್ಕಾಗಿ ಯಾರೂ ಪ್ರಾಣ ತ್ಯಾಗ ಮಾಡಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುತ್ತಾರೆ. ಇಂತಹವರಿಗೆ ಸೋನಿಯಾಗಾಂಧಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೂಡಲೇ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಡಿಸಿಸಿ ಕಾರ್ಯದರ್ಶಿ ಡೇರಿ ವೆಂಕಟೇಶ್, ಪಾಲಿಕೆ ಮಾಜಿ ಸದಸ್ಯ ಎಂ.ಸುನೀಲ್, ಮುಖಂಡರಾದ ವಿಜಯ್ ಕುಮಾರ್, ಗುಣಶೇಖರ್, ವಿಶ್ವ, ಶಂಕರ್, ಎಚ್.ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ್, ಫಾರುಖ್, ನಾಸೀರ್, ಕುರುಬಾರಳ್ಳಿ ಪ್ರಕಾಶ್, ಕುಮಾರ್, ಧರ್ಮೇಂದ್ರ, ಅಶೋಕಪುರಂ ಪುಟ್ಟರಾಜು, ರವಿ, ಸಂತೋಷ್, ರಾಘವೇಂದ್ರ, ಮಹದೇವು, ರಾಜೀವ್ ಭಾಗವಹಿಸಿದ್ದರು.