

ಉಡುಪಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ರಾಷ್ಟ್ರ ನಾಯಕ ಆಸ್ಕರ್ ಫೆರ್ನಾಂಡಿಸ್ ಪ್ರಥಮ ವರ್ಷದ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ಕಾಂಗ್ರೆಸ್ ಭವನದ ಆವರಣದಲ್ಲಿ ಆಸ್ಕರ್ ಪ್ರತಿಮೆ ಅನಾವರಣಗೊಳಿಸಲಾಯಿತು.
ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಪುತ್ಥಳಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಆಸ್ಕರ್ ಅವರು ಪಕ್ಷಾತೀತವಾಗಿ ಎಲ್ಲಾ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ರಾಜಕೀಯದಲ್ಲೇ ಅಪರೂಪದ ವ್ಯಕ್ತಿಯಾಗಿದ್ದು, ಸರಳ, ಸಜ್ಜನಿಕೆಯಿಂದ ಅಜಾತಶತ್ರುವಾಗಿದ್ದರು. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ನೆಹರೂ ಕುಟುಂಬದ ವಿಶ್ವಾಸಾರ್ಹವ್ಯಕ್ತಿಯಾಗಿದ್ದ ಅವರು ಜಿಲ್ಲೆಯಲ್ಲಿ 2ನೇ ಹಂತದ ನಾಯಕರನ್ನು ಬೆಳೆಸಿದ್ದಾರೆ. ಕರಾವಳಿ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಪ್ರಚಾರ ಬಯಸಿರಲಿಲ್ಲ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಜುಡಿತ್ ಶೇಷ್ಠ (ಆಸ್ಕರ್ ಸಹೋದರಿ), ಮಾಜಿ ಶಾಸಕ ಗೋಪಾಲ ಪೂಜಾರಿ , ವಿಪ ಮಾಜಿ ಸದಸ್ಯ ಐವನ್ ಡಿಸೋಜ, ಮಿಥುನ್ ರೈ, ಎಂ. ಎ. ಗಪೂರ್, ಭುಜಂಗ ಶೆಟ್ಟಿ, ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಪ್ರಖ್ಯಾತ ಶೆಟ್ಟಿ , ಕುದಿ ವಸಂತ ಶೆಟ್ಟಿ, ಡಾ.ಶ್ರೀಕಾಂತ ಸಿದ್ದಾಪುರ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಗೀತಾ ವಾಗ್ಳೆ, ಡಾ.ಸುನಿತಾ ಶೆಟ್ಟಿ ರೋಷನಿ ಒಲಿವರಾ, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.