

ವಿಜಯವಾಣಿ ಸುದ್ದಿಜಾಲ ತುಮಕೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಹಾಗೂ ಅನುಮತಿ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್ಹಾಲ್ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಟಕದ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯಪಾಲರ ವಿರುದ್ಧ, ಪ್ರಾಸಿಕ್ಯೂಷನ್ಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ವರ್ತಿಸುತ್ತಿದ್ದು, ಸಿಎಂ ವಿಚಾರದಲ್ಲಿ ಅವರ ನಡೆ ಖಂಡನೀಯ. ಇದೇ ವಿಚಾರವಾಗಿ ಆ.21ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೊಡಗೂಡಿ ರಾಜ್ಯಪಾಲರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಮಾಜಿ ಶಾಸಕ ಎಸ್.ರಫೀಕ್ ಅಹಮದ್ ಮಾತನಾಡಿ, 2023ರಲ್ಲಿ ಅಭೂತಪೂರ್ವ ಜನ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದು ಎರಡನೆಯ ಬಾರಿಗೆ ಸಿಎಂ ಆದ ಸಿದ್ದರಾಮಯ್ಯ ಅವರು ಚುನಾವಣೆ ಪೂರ್ವ ನೀಡಿರುವ ಭರವಸೆಯಂತೆ ಈಡೇರಿಸಿದಕ್ಕೆ ಹತಾಶೆಗೊಂಡ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಕಾಲದಲ್ಲಿ ಆಗಿರುವ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.
ಒಂದು ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-&ಜೆಡಿಎಸ್ ರಾಜಕೀಯ ಅಸ್ತ್ರವಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ಇನ್ನಿಲ್ಲದ ಗೊಂದಲ ಸೃಷ್ಟಿಸುತ್ತಿವೆ. ಇಡೀ ಕಾಂಗ್ರೆಸ್ ಹಾಗೂ ಸಾರ್ವಜನಿಕರು ಸಹ ಸಿದ್ದರಾಮಯ್ಯರ ಬೆನ್ನಿಗೆ ನಿಂತಿದ್ದು, ಸರ್ಕಾರವನ್ನು ಪತನಗೊಳಿಸಿ, ವಾಮಮಾರ್ಗದಿಂದ ಅಧಿಕಾರ ಹಿಡಿಯುವ ಮೈತ್ರಿ ಪಕ್ಷಗಳ ಅಟಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಮಾಜಿ ಶಾಸಕ ಎಸ್. ಷಫಿ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ಮಾಜಿ ಮೇಯರ್ ಎಂ.ಪ್ರಭಾವತಿ, ಪಾಲಿಕೆ ಮಾಜಿ ಸದಸ್ಯರಾದ ಇನಾಯತ್, ನಯಾಜ್, ಎನ್.ಮಹೇಶ್. ನಿಕೇತ ರಾಜ್ ಮೌರ್ಯ, ಗುರುಪ್ರಸಾದ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.