14 ಬ್ಲಾಕ್‌ಗಳಲ್ಲಿ ಕಾಂಗ್ರೆಸ್ ಕಚೇರಿ ಆರಂಭ

Ivan D'soza
Published on

ಶಿರಸಿ: ರಾಜ್ಯದ 100 ಕಡೆ ಕಾಂಗ್ರೆಸ್ ಕಚೇರಿ ಆರಂಭಿಸುವ ಕುರಿತು ಸಮೀಕ್ಷೆ ಮತ್ತು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಲಾಗುತ್ತಿದೆ. ಶಿರಸಿಯ ಜಿಲ್ಲಾ ಕಚೇರಿ ನವೀಕರಣದ ಜತೆಗೆ ಎಲ್ಲ 14 ಬ್ಲಾಕ್‌ಗಳಲ್ಲಿಯೂ ಕಾಂಗ್ರೆಸ್ ಕಚೇರಿ ಆರಂಭಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಹೇಳಿದರು.

ನಗರದಲ್ಲಿ ಸೋಮವಾರ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿವೇಶನ ಆರಂಭಗೊಂಡು 100 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಸೂಚನೆಯಂತೆ ಎಲ್ಲೆಡೆ ಕಚೇರಿ ಆರಂಭಿಸಲಾಗುತ್ತಿದೆ. ಸ್ವಂತ ಜಾಗ ಇರುವಲ್ಲಿ ಉತ್ತಮ ಕಟ್ಟಡ ನಿರ್ಮಿಸಲಿದ್ದೇವೆ. ಒಂದೊಮ್ಮೆ ಸ್ವಂತ ಜಾಗ ಇರದಿದ್ದಲ್ಲಿ ಜಾಗವನ್ನು ಮಂಜೂರಿ ಮಾಡಿಸಿಕೊಂಡು ಕಚೇರಿ ಕಟ್ಟಲಿದ್ದೇವೆ ಎಂದರು.

ಉಪ ಚುನಾವಣೆಯಲ್ಲಿ ಮೂರೂ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಇದರಿಂದಾಗಿ ಬಿಜೆಪಿಯ ಆರೋಪಗಳೆಲ್ಲ ಸುಳ್ಳು ಎಂಬುದು ಜನತಾ ನ್ಯಾಯಾಲಯದಲ್ಲಿ ತೀರ್ಮಾನವಾದಂತಾಗಿದೆ. ಸಿದ್ದರಾಮಯ್ಯ ನಾಯಕತ್ವ, ಜನಪರ ಯೋಜನೆಗಳಿಂದ ಕಂಗಾಲಾದ ಬಿಜೆಪಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿತ್ತು. ಬಿಜೆಪಿಯವರಿಗೆ ಈ ಚುನಾವಣೆಯಲ್ಲಿ ಸೂಕ್ತ ಉತ್ತರ ಸಿಕ್ಕಿದೆ. ಇನ್ನಾದರೂ ಬಿಜೆಪಿಯವರು ಅಪಪ್ರಚಾರ ನಿಲ್ಲಿಸಿ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಿ. ಬಿಜೆಪಿಯವರು ಅವರ ಸೋಲಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಸೋಲಿನ ಕಾರಣವನ್ನು ಬಸವನಗೌಡ ಪಾಟೀಲ ಯತ್ನಾಳ ಸ್ಪಷ್ಟವಾಗಿ ಹೇಳಿದ್ದು, ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರ ಭ್ರಷ್ಟಾಚಾರವೇ ಕಾರಣ. ಪಕ್ಷದ ದುರಾಡಳಿತ ಅವರ ಸೋಲಿಗೆ ನೇರ ಕಾರಣವಾಗಿದೆ ಎಂದರು.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಕೆಲ ತೊಡಕಿನಿಂದಾಗಿ ಲಾಭ ಪಡೆಯಲು ಸಾಧ್ಯವಾಗದವರಿಗೂ ಯೋಜನೆಯನ್ನು ತಲುಪಿಸುವ ಮೂಲಕ ಇನ್ನಷ್ಟು ಪ್ರಬಲಗಳಿಸಲಿದ್ದೇವೆ.ಇ-ಸ್ವತ್ತು ಜಾರಿಯಿಂದ ಮಲೆನಾಡಿನ ತಾಲೂಕುಗಳಲ್ಲಿ ಕೆಲವೆಡೆ ಸಮಸ್ಯೆ ಆಗಿರುವುದು ನಿಜ. ಈಗಾಗಲೇ ಇ-ಸ್ವತ್ತು ಸರಳೀಕರಣವಾಗಿದೆ. ಇನ್ನೂ ತೊಂದರೆ ತೊಡಕುಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು.

ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ವೆಂಕಟೇಶ ಹೆಗಡೆ ಹೊಸಬಾಳೆ, ಅಬ್ಬಾಸ್ ತೋನ್ಸೆ, ಜ್ಯೋತಿಗೌಡ ಪಾಟೀಲ, ಬಸವರಾಜ ದೊಡ್ಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net