

ಶಿವಮೊಗ್ಗ: ಅಶ್ಲೀಲ ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ಸೋಮವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಗೋಪಿವೃತ್ತದಿಂದ ಮಹಾವೀರ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ಕಾರ್ಯಕರ್ತರು, ರಾಜ್ಯ ತಲೆತಗ್ಗಿಸುವಂತೆ ಕೆಲಸ ಮಾಡಿದ್ದರೂ ಮಾಜಿ ಸಚಿವರನ್ನು ಬಂಧಿಸದೆ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಚಿವರು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾಜಿ ಸಚಿವರ ಮುಖವಾಡ ಧರಿಸಿದ್ದವನಿಗೆ ಬೇಡಿ ಹಾಕಿ ಕರೆತರುವ ಅಣಕು ದೃಶ್ಯ ಪ್ರದರ್ಶಿಸಿದ ನಂತರ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಕಾಯಾಧ್ಯಕ್ಷ ರವಿಕುಮಾರ್, ಪಾಲಿಕೆ ವಿಪಕ್ಷದ ನಾಯಕಿ ಯಮುನಾ ರಂಗೇಗೌಡ, ಮುಖಂಡರಾದ ಎನ್.ರಮೇಶ್, ವಿಜಯ್‌ಕುಮಾರ್, ಸಿ.ಜಿ.ಮಧುಸೂಧನ್, ವಿಜಯ್, ಮನೋಜ್, ಗಣೇಶ್, ಗಿರೀಶ್, ಪುರಲೆ ಮಂಜು, ವಿನಯ್, ಶಿವು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.