ಪಕ್ಷ ಕಟ್ಟಿದವರಿಗಿಲ್ಲ ಅಧಿಕಾರ ಭಾಗ್ಯ

Gangavathi constituency
ಗಂಗಾವತಿ ವಿಧಾನಸಭೆ ಚುನಾವಣೆ ಕ್ಷೇತ್ರದ ನಕ್ಷೆ.
Published on

ವೀರಾಪುರ ಕೃಷ್ಣ ಗಂಗಾವತಿ
ಾರ್ವರ್ಡ್ ಪ್ರಾಬಲ್ಯದ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಬ್ಯಾಕ್‌ವರ್ಡ್‌ಗಳಿಗೆ ಅಧಿಕಾರ ಒಲಿದು ಬಂದಿದ್ದು, ಆರಂಭದಿಂದಲೂ ಕಾಂಗ್ರೆಸ್ ಹಿಡಿತದಲ್ಲಿದ್ದ ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. 1978ರಲ್ಲಿ 85,791 ಮತದಾರರಿದ್ದರೆ, ಇದೀಗ 2,00,597ಕ್ಕೇರಿದೆ. 99,497 ಪುರುಷರು, 1,01,089 ಮಹಿಳಾ ಮತದಾರರಿದ್ದಾರೆ.

ಕಾಂಗ್ರೆಸ್‌ನ ದೇಸಾಯಿ ಭೀಮಸೇನರಾವ್ 1957ರಲ್ಲಿ ಮೊದಲ ಶಾಸಕರಾಗಿದ್ದರು. 1962 ಮತ್ತು 67ರಲ್ಲಿ ಆನೆಗೊಂದಿ ರಾಜವಂಶಸ್ಥ ತಿರುಮಲರಾಯ ದೇವರಾಯಲು ಆಯ್ಕೆಯಾಗಿದ್ದು, 1972ರಲ್ಲಿ ಎಚ್.ಆರ್.ಶ್ರೀರಾಮುಲು 38,967 ಮತ ಪಡೆದು ಅಧಿಕಾರ ಪಡೆದರು. 1974ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಚ್.ಆರ್.ಶ್ರೀರಾಮುಲು ಅಣ್ಣನ ಮಗ ಎಚ್.ಜಿ.ರಾಮುಲು ಚುನಾಯಿತರಾದರು. ಸಂಸ್ಥಾ ಕಾಂಗ್ರೆಸ್ ವಿಭಜನೆಯಾದಾಗ ಇಂದಿರಾ ಕಾಂಗ್ರೆಸ್ ಪ್ರಾಬಲ್ಯ ಪಡೆದಿದ್ದು, 1978ರಲ್ಲಿ ಸಿ.ಯಾದವರಾವ್ 31793 ಮತಗಳೊಂದಿಗೆ ಆಯ್ಕೆಯಾದರು. ಜನತಾ ಪಾರ್ಟಿಯಿಂದ ಚುನಾವಣೆ ಎದುರಿಸಿದ್ದ ಶ್ರೀರಂಗದೇವರಾಯಲು ಪರಾಭವಗೊಂಡರು. ಇಂದಿರಾ ಕಾಂಗ್ರೆಸ್ ತೊರೆದು ದೇವರಾಜ್ ಅರಸು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದ ಸಿ.ಯಾದವರಾವ್ ಕ್ಷೇತ್ರದ ಮೊದಲ ಸಚಿವರಾಗಿದ್ದರು.

ಪಕ್ಷಾಂತರಿಗಳಿಗೆ ಮಣೆ

ಆರಂಭದಿಂದಲೂ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರವನ್ನು ಮಾಜಿ ಸಂಸದ ಎಚ್.ಜಿ.ರಾಮುಲು ವಶಕ್ಕೆ ಬಂದಿದ್ದು, 1999ರವರೆಗೂ ತ್ರಿವಳಿ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಇವರು ಬೆಂಬಲಿಸಿದವರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದು, ಅವರಿಂದ ಬೆಳೆದವರೇ ವಿರೋಧಿಗಳಾಗಿದ್ದು ವಿಪರ್ಯಾಸ. 1983ರಲ್ಲಿ ದೇವರಾಜ ಕಾಂಗ್ರೆಸ್‌ನಿಂದ ಮತ್ತೆ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಯಾದವರಾವ್ ಅವರನ್ನು ರಾಮುಲು ಸೋಲಿಸಿದ್ದು, ಪಕ್ಷೇತರ ಅಭ್ಯರ್ಥಿ ಎಚ್.ಎಸ್.ಮುರಳೀಧರರನ್ನು (ಹುಲಿ ಚಿಹ್ನೆ) ಬೆಂಬಲಿಸುವ ಮೂಲಕ ಶಾಸಕರನ್ನಾಗಿ ಆಯ್ಕೆ ಮಾಡಿದರು. 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಸ್ವಾತಂತ್ರ್ಯ ಹೋರಾಟಗಾರ ಗೌಳಿ ಮಹಾದೇವಪ್ಪ ಶಾಸಕರಾಗಿ ಆಯ್ಕೆಯಾದರು. ಜನತಾ ಪಕ್ಷದಲ್ಲಿದ್ದ ಶ್ರೀರಂಗದೇವರಾಯಲು ಕಾಂಗ್ರೆಸ್‌ನಿಂದ 1989, 1994, 1999ರಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ.

ಬದಲಾದ ಚಿತ್ರಣ

ರಾಯಚೂರಿನಿಂದ ವಿಭಜನೆ ನಂತರ ಕೊಪ್ಪಳ ಜಿಲ್ಲೆ ಪ್ರತ್ಯೇಕವಾಗಿದ್ದು, ಕಾಂಗ್ರೆಸ್ ಅಧಿಪತ್ಯಕ್ಕೆ ಹೊಡೆತ ಬೀಳಲು ಶುರುವಾಯಿತು. ಕಾಂಗ್ರೆಸ್ ಮುಖಂಡರ ಏಕಚಕ್ರಾಧಿಪತ್ಯ ಧೋರಣೆಗೆ ಬೇಸತ್ತ ಬಹುತೇಕ ಕಾಂಗ್ರೆಸಿಗರು ಇತರ ಪಕ್ಷಗಳಿಗೆ ವಲಸೆ ಹೋದರು. ಜೆಡಿಎಸ್‌ಗೆ ಹೋದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ 2004ರಲ್ಲಿ 39486 ಮತಗಳೊಂದಿಗೆ ಶಾಸಕ ಮತ್ತು ಸಂಪುಟ ದರ್ಜೆ ಸಚಿವರಾದರು. ಕಾಂಗ್ರೆಸಿನಲ್ಲಿದ್ದ ಹಾಲಿ ಶಾಸಕ ಪರಣ್ಣಮುನವಳ್ಳಿ ಬಿಜೆಪಿ ಸೇರಿ 2008ರಲ್ಲಿ 37121 ಗಳೊಂದಿಗೆ ಮೊದಲ ಬಾರಿಗೆ ಶಾಸಕರಾದರು.

2013ರಲ್ಲಿ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್‌ಗೆ ವಾಪಸಾದರೂ, ಪಕ್ಷದ ಮುಖಂಡರ ವೈಮನಸ್ಸಿನಿಂದಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿ 60,303 ಮತಗಳೊಂದಿಗೆ ಎರಡನೇ ಬಾರಿ ಶಾಸಕರಾದರು. 2018ರಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ 67,617 ಮತಗಳೊಂದಿಗೆ ಮತ್ತೆ ಆಯ್ಕೆಯಾದರು. ಕಾಂಗ್ರೆಸ್ ಹಿಡಿತದಿಂದ ತಪ್ಪಿಸಿಕೊಂಡ ಕ್ಷೇತ್ರ ವಶಕ್ಕೆ ಪಡೆಯಲು ಕೈನವರು ಇನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

2018ರಲ್ಲಿ 13 ಅಭ್ಯರ್ಥಿಗಳು ಕಣಕ್ಕೆ

1978ರಲ್ಲಿ 85791 ಮತದಾರರಿದ್ದ ಕ್ಷೇತ್ರದಲ್ಲಿ 55831 ಮತ ಚಲಾವಣೆಯಾಗಿತ್ತು. 1983ರಲ್ಲಿ ನಡೆದ ಉಪಚುನಾವಣೆಯಲ್ಲಿ 97839 ಮತಗಳಲ್ಲಿ 49132, 1985ರಲ್ಲಿ 106511 ಪೈಕಿ 68697, 1989ರಲ್ಲಿ 135521 ಪೈಕಿ 79062, 1994ರಲ್ಲಿ 139782 ಪೈಕಿ 82111, 1999ರಲ್ಲಿ 160151 ಪೈಕಿ 91,582, 2004ರಲ್ಲಿ 114381, 2008ರಲ್ಲಿ 156693 ಪೈಕಿ 99322, 2013ರಲ್ಲಿ 170865 ಪೈಕಿ 125343 ಮತ್ತು 2018ರಲ್ಲಿ 194079 ಪೈಕಿ 147273 ಮತದಾರರು ಹಕ್ಕು ಚಲಾಯಿಸಿದ್ದರು.

ಆರಂಭದಿಂದಲೂ ಇಬ್ಬರು ಪ್ರತಿಸ್ಪರ್ಧಿಗಳಿಂದ ಆರಂಭವಾದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜನತಾಪಕ್ಷ, ಜೆಡಿಯು, ಜೆಡಿಎಸ್, ಕನ್ನಡನಾಡು, ಬಿಎಸ್ಸಾರ್ ಕಾಂಗ್ರೆಸ್, ಕೆಜೆಪಿ, ಸಿಪಿಐಗಳು ಈಗಳೂ ಅದೃಷ್ಟ ಪರೀಕ್ಷೆಗಳಿದಿವೆ. 2018ರಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಪಕ್ಷ ಮತ್ತು ಪಕ್ಷೇತರ ಸೇರಿ 13 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ವಿಶೇಷ. 2018ರಲ್ಲಿ ಇಕ್ಬಾಲ್ ಅನ್ಸಾರಿ ಶೇ.48.11 ಮತಗಳೊಂದಿಗೆ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿದ್ದಾರೆ.

ಪ್ರಚಾರಕ್ಕೆ ಬಂದಿದ್ದರು ಘಟನಾಘಟಿಗಳು

ಜಿಲ್ಲೆ ವಿಭಜನೆ ಮೊದಲೇ ಗಂಗಾವತಿ ವಿಧಾನಸಭೆ ಕ್ಷೇತ್ರ ಮಹತ್ವ ಪಡೆದುಕೊಂಡಿದ್ದು, ಅಭ್ಯರ್ಥಿಗಳ ಗೆಲುವಿಗಾಗಿ ಘಟನಾಘಟಿಗಳು ಪ್ರಚಾರಕ್ಕೆ ಬಂದಿದ್ದರು. 1974ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಶ್ರೀರಂಗದೇವರಾಯಲು ಗೆಲುವಿಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕ್ಷೇತ್ರ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದು, ಒಂದು ತಿಂಗಳು ವಾಸ್ತವ್ಯವಿದ್ದರು.

ಹಾಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಮಾಜಿ ಪ್ರಧಾನಿಗಳಾದ ರಾಜೀವಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ವಿ.ಪಿ.ಸಿಂಗ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ, ಆರ್.ಗುಂಡೂರಾವ್, ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಎಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಬಂದರೆ , ಚಿತ್ರನಟರಾದ ಅನಂತನಾಗ್, ಶಂಕರನಾಗ್, ಸುಧೀರ್, ಸೌಂದರ್ಯ, ಶ್ರುತಿ, ತೆಲುಗಿನ ಚಿರಂಜೀವಿ, ವಿಜಯಶಾಂತಿ ಪ್ರಚಾರ ಕೈಗೊಂಡಿದ್ದರು. ಸಿಂಧನೂರಿಗೆ ಬಂದಿದ್ದ ನಟ ಎನ್.ಟಿ.ರಾಮರಾವ್ ಗಂಗಾವತಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಗೌಳಿ ಮಹಾದೇವಪ್ಪ ಪರ ಮತಯಾಚಿಸಿದ್ದರು. 2004ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಅಶೋಕಸ್ವಾಮಿ ಹೇರೂರು ಪರ ಉದ್ಯಮಿ ವಿಜಯಮಲ್ಯ ಟಿಪ್ಪು ಖಡ್ಗದೊಂದಿಗೆ ಪ್ರಚಾರ ಕೈಗೊಂಡಿದ್ದರು.

GANGAVATHI POLITICIANS
ಎಚ್.ಆರ್.ಶ್ರೀರಾಮುಲು, ಎಚ್.ಜಿ.ರಾಮುಲು, ಶ್ರೀರಂಗದೇವರಾಯಲು, ಎಚ್.ಎಸ್.ಮುರಳೀಧರ, ಗೌಳಿ ಮಹಾದೇವಪ್ಪ, ಇಕ್ಬಾಲ್ ಅನ್ಸಾರಿ, ಪರಣ್ಣ ಮುನವಳ್ಳಿ
ಮೂವರಿಗೆ ಒಲಿದಿತ್ತು ಮಂತ್ರಿಗಿರಿ

ಜಿಲ್ಲೆ ವಿಭಜನೆ ಮುನ್ನವೇ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿದ್ದು, 1978ರಲ್ಲಿ ಸಿಎಂ ದೇವರಾಜ ಅರಸು ಸಚಿವ ಸಂಪುಟದಲ್ಲಿ ಸಿ.ಯಾದವರಾವ್ ಮೀನುಗಾರಿಕೆ ಸಚಿವರಾಗಿದ್ದರು.1994ರಲ್ಲಿ ಸಿಎಂ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ಶ್ರೀರಂಗದೇವರಾಯಲು ಅವರಿಗಾಗಿ ಕಾಡಾ ಮತ್ತು ಗಡಿ ಅಭಿವೃದ್ಧಿ ಖಾತೆ ಸೃಷ್ಟಿಸಲಾಗಿತ್ತು. ಇಕ್ಬಾಲ್ ಅನ್ಸಾರಿ ವೈದ್ಯಕೀಯ, ಕಾರ್ಮಿಕ ಖಾತೆ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಸ್ವಪಕ್ಷೀಯರೇ ಕಾರಣರಾಗಿದ್ದು, ಗುಂಪುಗಾರಿಕೆ ಮಿತಿ ಮೀರಿದೆ. ಮೂಲ ಮತ್ತು ವಲಸೆ ಮುಖಂಡರ ಗೊಂದಲದಿಂದ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.

ಮೂಲ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿಲ್ಲ

ರೈತ ಸಂಘದಿಂದ ಸ್ಪರ್ಧಿಸಿ ಬಿಜೆಪಿ ಸೇರಿ ಮೂರು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಎಚ್.ಎಸ್.ಗಿರೇಗೌಡ, ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿಗೆ ಇದುವರಿಗೂ ಅಧಿಕಾರ ಸಿಕ್ಕಿಲ್ಲ. ರೈತ ಸಂಘ ಮತ್ತು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಎಸ್.ಗಿರೇಗೌಡಗೆ ಅಧಿಕಾರದ ಯೋಗವಿಲ್ಲ. ನಾಲ್ಕು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿ ಪ್ರತಿ ಚುನಾವಣೆಯಲ್ಲೂ ಠೇವಣಿ ಕಳೆದುಕೊಂಡಿದ್ದಾರೆ.

ಸಿಪಿಐ ಮತ್ತು ಪಕ್ಷೇತರರು ಮತ ಗಳಿಕೆಯಲ್ಲಿ ನಾಲ್ಕು ಅಂಕಿ ದಾಟಿಲ್ಲ. ಗೌಳಿ ಮಹಾದೇವಪ್ಪ ಹೊರತುಪಡಿಸಿ, ಬಹುತೇಕ ಶಾಸಕರು ಕಾಂಗ್ರೆಸ್ ಮೂಲದಿಂದ ಬಂದಿದ್ದು, ಮೂಲ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net