ಗ್ಯಾರಂಟಿ ನೀಡಿ ಅಭಿವೃದ್ಧಿ ಕಡೆಗಣಿಸಿದ ಕಾಂಗ್ರೆಸ್: ಆರೋಪ

Published on

ಮೈಸೂರು: ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿದ್ದು, ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುತ್ತಾ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಜೆಡಿಎಸ್ ಎಸ್‌ಸಿ ವಿಭಾಗದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಅನ್ನದಾನಿ ಟೀಕಿಸಿದರು.
ದಲಿತರಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ. ಅನ್ನು ಇತರೆಡೆಗೆ ಮನಸೋ ಇಚ್ಛೆ ಬಳಸಲಾಗಿದೆ. ಗ್ಯಾರಂಟಿಗಳನ್ನು ನೀಡುವ ಮೂಲಕ ಜನರನ್ನು ಮರಳು ಮಾಡುತ್ತಾ ನಿಜವಾದ ರಾಜ್ಯದ ಅಭಿವೃದ್ಧಿಯನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೀಗಾಗಿ ದಲಿತ ಸಮುದಾಯದವರು ರಾಜ್ಯಕ್ಕೆ ಕೊಡುಗೆ ನೀಡಿದ ರಾಜವಂಶಸ್ಥ ಯದುವೀರ್ ಹಾಗೂ ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಬಾಲರಾಜು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಅಶ್ವಿನ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ದಲಿತರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದೆಯೇ ಹೊರತು ಅವರಿಗೆ ಯಾವ ಅನುಕೂಲ ಮಾಡಿಕೊಟ್ಟಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಬೆಳೆಸಿತು ಎಂಬಂತೆ ಮಾತನಾಡಿದ್ದಾರೆ. ಆದರೆ ಅಂಬೇಡ್ಕರ್ ಕಷ್ಟದಿಂದ ಮೇಲೆ ಬಂದು ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ನಾಯಕ. ಅವರ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ. ಇದೆಲ್ಲವನ್ನು ಮನಗಂಡು ದಲಿತರು, ಹಿಂದುಳಿದವರು ಬಿಜೆಪಿ ಮತ ನೀಡಬೇಕು ಎಂದು ಮನವಿ ಮಾಡಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಎಸ್.ಬಿ.ಎಂ.ಮಂಜು, ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net